ಕರಾವಳಿ

7 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಅವೈಜ್ಞಾನಿಕವೆಂಬ ಆರೋಪ: ಕಾಮಗಾರಿ ಬಂದ್ ಮಾಡಿಸಿದ ಪಬ್ಲಿಕ್!

Pinterest LinkedIn Tumblr

ಕುಂದಾಪುರ: ತಾಲೂಕಿನ ಬೀಜಾಡಿಯಿಂದ ಚಾರು ಕೊಟ್ಟಿಗೆ ಸಂಪರ್ಕದ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಅಲ್ಲಲ್ಲಿ ಕಳಪೆ ಕಾಮಗಾರಿಗಳು ನಡೆದಿದೆ ಹಾಗೂ ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಬರುತ್ತಿಲ್ಲ, ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆಯೆಂದು ಆರೋಪಿಸಿ ಮಂಗಳವಾರ ಬೆಳಿಗ್ಗೆನಿಂದ ಮದ್ಯಾಹ್ನದವರೆಗೆ ವಕ್ವಾಡಿಯಲ್ಲಿ ನಾಗರಿಕರು ಹಾಗೂ ರಿಕ್ಷಾ ಚಾಲಕರು ಕಾಮಗಾರಿ ತಡೆದು ಆಕ್ರೋಷ ವ್ಯಕ್ತಪಡಿಸಿದರು.

ಸುಮಾರು 7 ಕೋಟಿ ಅಂದಾಜು ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಲು ಭಾಗದಷ್ಟು ರಸ್ತೆ ನಿರ್ಮಾಣ ಕಾರ್ಯ ನಡೆದಿದೆ. ಆದರೆ ಕಾಮಗಾರಿ ನಡೆಸಿದ ಬಳಿಕ ರಸ್ತೆ ತಡಯದೇ ವಾಹನ ಸಾಗಲು ಅವಕಾಶ ನೀಡುತ್ತಿದ್ದು ಇದರಿಂದ ಅವಘಡಗಳು ಹೆಚ್ಚಿದೆ. ಮಂಗಳವಾರ ಬೆಳಿಗ್ಗೆ ಕೂಡ ಕಾರ್ಖಾನೆಯೊಂದಕ್ಕೆ ಮಹಿಳೆಯರನ್ನು ಕರೆತರುತ್ತಿದ್ದ ಟೆಂಪೋ ಟ್ರಾವೆಲ್ಲರ್ ಪಲ್ಟಿಯಾಗಿ 8 ಮಹಿಳೆಯರು ಗಾಯಗೊಂಡ ಘಟನೆ ವಕ್ವಾಡಿ ರೈಲ್ವೆ ಬ್ರಿಡ್ಜ್ ಬಳಿ ನಡೆದಿತ್ತು. ಕಾಮಗಾರಿ ನಡೆಸುವವರ ಅವೈಜ್ಞಾನಿಕ ಕ್ರಮವೇ ಇದಕ್ಕೆ ಕಾರಣ ಎಂದು ಆರೋಪಿಸಿದ ಸ್ಥಳೀಯರು ವಕ್ವಾಡಿ ಭಾಗದಲ್ಲಿ ನಡೆಯುತ್ತಿದ್ದ ಕಾಮಗಾರಿ ತಡೆದು ಆಕ್ರೋಷ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಕೂಡಲೇ ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.

(ಪಲ್ಟಿಯಾದ ಟೆಂಪೋ ಟ್ರಾವೆಲರ್)

ಜನರ ಕರೆಗಳಿಗೆ ಇಂಜಿನಿಯರ್ ಸ್ಪಂದಿಸುತ್ತಿಲ್ಲ, ಕೋಟಿಗಟ್ಟಲೇ ವೆಚ್ಚದ ಕಾಮಗಾರಿ ನಡೆಯುವಾಗ ಇಂಜಿನಿಯರ್ ಸ್ಥಳದಲ್ಲಿಯೇ ಇದ್ದು ಕೆಲಸ ಗಮನಿಸಬೇಕು. ಆದರೇ ಇಂತಹ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಜನರು ದೂರಿದರು. ಇಂಜಿನಿಯರ್ ಸ್ಥಳಕ್ಕೆ ಬರುವವರೆಗೂ ಕಾಮಗಾರಿ ನಡೆಸಲು ಬಿಡೊಲ್ಲ ಎಂದು ನಾಗರಿಕರು ಪಟ್ಟು ಹಿಡಿದಾಗ ಕಾಮಗಾರಿ ಗುತ್ತಿಗೆದಾರರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ರಸ್ತೆ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಉತ್ತಮ ಸಂಪರ್ಕ ರಸ್ತೆ ಮಾಡಿಕೊಡುವುದಾಗಿಯೂ ಗುತ್ತಿಗೆದಾರರು ಈ‌ ಸಂದರ್ಭ ನೆರೆದಿದ್ದ ಕಾಳಾವರ ಗ್ರಾ.ಪಂ ಅಧ್ಯಕ್ಷ ರವಿರಾಜ್ ಶೆಟ್ಟಿ ಹಾಗೂ ನಾಗರಿಕರಿಗೆ ಭರವಸೆಯಿತ್ತರು. ಬುಧವಾರ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡುವ ಆಶ್ವಾಸನೆ ನೀಡಿದ ಬಳಿಕ ಮಧ್ಯಾಹ್ನದ ಸುಮಾರಿಗೆ ಕಾಮಗಾರಿ ಮುಂದುವರಿಸಲು ನಾಗರಿಕರು ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಸ್ಥಳೀಯರಾದ ರಮೇಶ್ ಶೆಟ್ಟಿ, ರಂಜಿತ್ ಶೆಟ್ಟಿ, ಸುಧೀಂದ್ರ, ಉಮೇಶ್ ಎಚ್.ಕೆ., ರವಿಚಂದ್ರ ಕುಲಾಲ್, ಪ್ರದೀಪ್, ದಿನೇಶ್, ದೀಪಕ್ ಶೆಟ್ಟಿ, ಶಂಕರ್, ಹರೀಶ್ ಮೊದಲಾದವರಿದ್ದರು.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.