ಕರಾವಳಿ

ಕೊಲೆ ಹಾಗೂ ದರೋಡೆಗೆ ಸಂಚು ಪ್ರಕರಣ : ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಬಂಧನ

Pinterest LinkedIn Tumblr

ಮಂಗಳೂರು, ಫೆಬ್ರವರಿ.05: ನಗರದ ಫಳ್ನೀರ್ ಬಳಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಆರೋಪದ ಮೇಲೆ ಶನಿವಾರ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ 4 ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳಾದ ತೊಕ್ಕೊಟ್ಟು ಒಳಪೇಟೆ ನಿವಾಸಿ ಮನೋಜ್ ಕುಮಾರ್ (33), ಮೊಗವೀರಪಟ್ಣ ಬೀಚ್ ಬಳಿಯ ನಿವಾಸಿ ಪ್ರಸಾದ್ ಯಾನೆ ಪಚ್ಚು (28), ಮೊಗವೀರಪಟ್ಣ ವ್ಯಾಘ್ರ ಚಾಮುಂಡೇಶ್ವರಿ ದೇವಳದ ಬಳಿಯ ನಿವಾಸಿ ಶ್ರವಣ್ (22), ತೊಕ್ಕೊಟ್ಟು ಭಟ್ ನಗರ ನಿವಾಸಿ ಸುಜಿತ್ (27) ಅವರನ್ನು ಮಂಗಳೂರಿನ ಸಿಸಿಬಿ ಪೊಲೀಸರು ಫಳ್ನಿರ್ ನಲ್ಲಿ ಬಂಧಿಸಿದ್ದರು.

ನಗರದ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿ ಟಾಟಾ ಸುಮೋ ವಾಹನವೊಂದರಲ್ಲಿ ಬಂದ 9-10 ಮಂದಿ ಯುವಕರು ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರಿಂದ ತಲವಾರು, ಮಚ್ಚು, ಚೂರಿ, 40 ಗ್ರಾಂ ಗಾಂಜಾ ಮತ್ತು 3 ಮೊಬೈಲ್ ಫೋನ್, ಟಾಟಾ ಸುಮೋ ಕಾರು ಸೇರಿದಂತೆ ಒಟ್ಟು 1,19,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿಗಳ ಪೈಕಿ ಪ್ರಸಾದ್ ಎಂಬಾತನ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣ, 3 ಕೊಲೆಯತ್ನ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ. ಆತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ.

ಆರೋಪಿಗಳಾದ ಶ್ರವಣ್ ಹಾಗೂ ಮನೋಜ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತಾರಾಮ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಬಳಿಕ ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಪಾಂಡೇಶ್ವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಪಾಂಡೇಶ್ವರ ಪೊಲೀಸರು ರವಿವಾರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.