ಕುಂದಾಪುರ/ಬೆಂಗಳೂರು: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಂಗಳವಾರದಂದು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಇಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹಾಲಾಡಿ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಈ ಹಿಂದೆ ಇದ್ದ ಬಹಳಷ್ಟು ಗೊಂದಲಗಳಿಗೆ ತೆರೆ ಎಳೆದರು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಆರ್.ಅಶೋಕ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿ ಹಲವು ಗಣ್ಯರ ಸಮ್ಮುಖದಲ್ಲಿ ಮಾಜಿ ಶಾಸಕ ಪುನಃ ಮಾತೃ ಪಕ್ಷಕ್ಕೆ ಮರಳಿದ್ದಾರೆ.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಮೂರು ಬಾರಿ ಬಿಜೆಪಿಯಿಂದ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಈ ಹಿಂದೆ ಕ್ಷೇತ್ರದ ಜನತೆಯ ಅಪೇಕ್ಷೆಯಂತೆ ಪಕ್ಷೇತರವಾಗಿ ಸ್ಪರ್ಧಿಸಿದ್ದೆ. ಆದರೇ ಜನರು ಬಿಜೆಪಿ ಸೇರುವಂತೆ ಹಿಂದಿನಿಂದಲೂ ಬೇಡಿಕೆಯಿಟ್ಟಿದ್ದರು. ಅವರ ಆಶಯದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮತ್ತೆ ಬಿಜೆಪಿಗೆ ಮರಳಿರುವೆ. ಯಾವುದೇ ಸ್ಥಾನ ಮಾನದ ಆಕಾಂಕ್ಷೆಯಿಲ್ಲ.ಮಂತ್ರಿ ಸ್ಥಾನ ನೀಡುವುದಾಗಿ ಕರೆದು ಅವಮಾನಿಸಿದಾಗ ಅಂದು ಬೇಸರಗೊಂಡಿದ್ದು ನಿಜ. ಆದರೇ ಈಗ ಯಾವ ಬೇಸರವಿಲ್ಲ. ಈ ಹಿಂದಿನ ಎಲ್ಲಾ ನೋವನ್ನು ಮರೆತಿರುವೆ. ಮೋದಿಯವರು ಮತ್ತು ರಾಜ್ಯ ನಾಯಕರ ಮೇಲಿನ ಗೌರವದಿಂದ ಮತ್ತೆ ಪಕ್ಷಕ್ಕೆ ಬರುತ್ತಿರುವೆ ಎಂದರು.
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಹಾಲಾಡಿ ಬಿಜೆಪಿಗೆ ಬಂದಿದ್ದು ಆನೆ ಬಲ ಬಂದಂತಾಗಿದೆ ಎಂದರು. ಹಾಲಾಡಿ ಅವರು ಮಿಸ್ಡ್ ಕಾಲ್ ನೀಡುವ ಮೂಲಕ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದಿದ್ದಲ್ಲದೇ ಪಕ್ಷದ ಧ್ವಜ ಸ್ವೀಕರಿಸಿ ಬಿಜೆಪಿ ಸೇರ್ಪಡೆಗೊಂಡರು.
ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮೀನುಗಾರ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸದಾನಂದ ಬಳ್ಕೂರು, ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಮುಖಂಡರಾದ ಭಾಸ್ಕರ್ ಬಿಲ್ಲವ, ಪ್ರದೀಪ್ ಸಂಗಮ್, ಸುನೀಲ್ ಶೆಟ್ಟಿ ಹೇರಿಕುದ್ರು, ಮಂಜು ಬಿಲ್ಲವ, ಸತೀಶ್ ಪೂಜಾರಿ ವಕ್ವಾಡಿ, ಸತೀಶ್ ಶೆಟ್ಟಿ ಸೇರಿದಂತೆ ಜಿ.ಪಂ, ತಾಪಂ ಸದಸ್ಯರು, ಸ್ಥಳಿಯಾಡಳಿತದ ಪ್ರತಿನಿಧಿಗಳು, ಬಿಜೆಪಿ ಮುಖಂಡರು ಬೆಂಗಳೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಮೂಲದ ಹಾಲಾಡಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಮೊದಲು ಬಿಜೆಪಿ ಮಲ್ಲೇಶ್ವರಂ ಕಚೇರಿಯಲ್ಲಿ ಸರಳ ಸಮಾರಂಭ ಮಾಡುವ ಬಗ್ಗೆ ಚಿಂತನೆ ಮಾಡಲಾಗಿತ್ತು.ಆದರೆ ಹಾಲಾಡಿಯವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದ್ದ ಕಾರಣ ಕಾರ್ಯಕ್ರಮವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಇಂದು ಸಂಜೆ 4 ಗಂಟೆಗೆ ಅರಮನೆ ಮೈದಾನದ ಗೇಟ್ ನಂ.2 ರಲ್ಲಿ ಈ ಸಮಾರಂಭ ನಡೆಯಿತು.
ವರದಿ- ಯೋಗೀಶ್ ಕುಂಭಾಸಿ