ಕರಾವಳಿ

ನನ್ನ ಮಗಳದ್ದು ಆತ್ಮಹತ್ಯೆಯಲ್ಲ, ದೈಹಿಕ ಶಿಕ್ಷಕನಿಂದ ನಡೆದ ಕೊಲೆ, ನಮಗೆ ನ್ಯಾಯ ಕೊಡಿಸಿ : ಜೈಬುನ್ನೀಸಾ ತಂದೆ ಮೊಹಮ್ಮದ್ ಇಬ್ರಾಹಿಂ

Pinterest LinkedIn Tumblr

ಮಂಗಳೂರು : ನನ್ನ ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ, ನಮಗೆ ನ್ಯಾಯ ಕೊಡಿಸಿ ಎಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿದ ಮಂಡ್ಯದ ಜಿಲ್ಲೆಯ ಕೆ.ಅರ್. ಪೇಟೆಯ ನವೋದಯ ವಸತಿ ಶಾಲೆಯ ವಿದ್ಯಾರ್ಥಿನಿ ಜೈಬುನ್ನೀಸಾ (12)ಳ ತಂದೆ ಮೊಹಮ್ಮದ್ ಇಬ್ರಾಹಿಂ ದು:ಖ ತೊಡಿಕೊಂಡಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಸಾವನ್ನಪ್ಪುವ ಮುನ್ನ ತಾಯಿಗೆ ಕರೆ ಮಾಡಿ, `ದೈಹಿಕ ಶಿಕ್ಷಕ ರವಿ ಶಿವಕುಮಾರ್ ಎಂಬಾತ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ತಲೆಯನ್ನು ಗೋಡೆಗೆ ಜಜ್ಜುತ್ತಾನೆ. ಅವಮಾನ ಮಾಡುತ್ತಿದ್ದಾನೆ. ಒಮ್ಮೆ ನನ್ನನ್ನು ಕರೆದುಕೊಂಡು ಹೋಗಿ’ ಎಂದು ಮನವಿ ಮಾಡಿದ್ದಳು.

ಆಗ ತಾಯಿ ತಕ್ಷಣ ಅಲ್ಲಿಂದ ಓಡಿಹೋಗಿ ಪಕ್ಕದ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆಯೂ ಹೇಳಿದ್ದರು. ಆದರೆ, ಆಕೆಯ ಮಾತನ್ನು ರವಿ ಕೇಳಿಸಿಕೊಂಡಿದ್ದಾನೆ ಎಂದು ಅದೇ ಶಾಲೆಯಲ್ಲಿ ಓದುತ್ತಿರುವ ಕಿರಿ ಮಗಳು ಫಾತಿಮಾ ನಿಹಾಲ ಹೇಳಿದ್ದಾಳೆ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿ ವಸತಿ ಕೇಂದ್ರದಲ್ಲಿರುವ ಫ್ಯಾನಿಗೆ ನೇಣುಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಚಿತ್ರದುರ್ಗದಲ್ಲಿರುವಾಗಲೂ ತನ್ನ ಮಗಳು ಕರೆ ಮಾಡಿ ಅಲ್ಲಿಂದ ಕರೆದುಕೊಂಡು ಹೋಗು ಎಂದು ಕೇಳಿದ್ದಳು. ಈ ಹಿನ್ನೆಲೆ ನಾನು ಆದಷ್ಟು ಬೇಗ ಮಂಡ್ಯಕ್ಕೆ ಬರುವುದಾಗಿ ಆಕೆಗೆ ಭರವಸೆ ನೀಡಿದ್ದೆ. ಜೊತೆಗೆ ಅಲ್ಲಿನ ವಾರ್ಡನ್ ಹಾಗೂ ಇತರ ಶಿಕ್ಷಕರಿಗೂ ಈ ಬಗ್ಗೆ ಗಮನಹರಿಸುವಂತೆ ತಿಳಿಸಿದ್ದೆ. ಆದರೆ, ಇದೀಗ ತನ್ನ ಮಗಳು ಕೊಲೆಯಾಗಿದ್ದಾಳೆ ಎಂದು ಬಾಲಕಿ ತಂದೆ ದುಃಖಿತರಾದರು.

ಕೊಲೆಗೂ ಸ್ವಲ್ಪ ದಿನ ಮುನ್ನ ಮಗಳು ಜೈಬುನ್ನೀಸಾಳನ್ನು ಬೇರೆ ಕೋಣೆಗೆ ವರ್ಗಾಯಿಸಲಾಗಿತ್ತು. ಇನ್ನು ತಂಗಿ ಆಕೆಯ ಬಳಿ ಮಾತನಾಡಲು ಬಂದರೆ ಅದಕ್ಕೂ ಅವಕಾಶ ನೀಡುತ್ತಿರಲಿಲ್ಲ ಎಂದು ಆರೋಪಿಸಿದ ಇಬ್ರಾಹಿಂ ಅವರು, ಕೊಲೆಯಾದ ದಿನ ಶಾಲೆ ಬೇಗ ಬಿಟ್ಟಿದ್ದರಿಂದ ಕಿರಿಮಗಳು ಅಕ್ಕನ ಕೋಣೆಗೆ ಹೋದಾಗ ಆಕೆಯ ಶವ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.

ಆಗ ಆರೋಪಿ ರವಿ, ಅಕ್ಕ-ತಂಗಿ ಜಗಳವಾಡಿ ಆಕೆ ಆತ್ಮಹತ್ಯೆ ಮಾಡಿಲಕೊಂಡಿರುವುದಾಗಿ ಹೇಳಬೇಕೆಂದು ಆಕೆಗೆ ಹೇಳಿದ್ದಾನೆ. ತಕ್ಷಣ ಶಾಲೆಯಿಂದ ಓಡಿಹೋದ ಕಿರಿಯ ಮಗಳು ಪಕ್ಕದ ಪೆಟ್ರೋಲ್ ಬಂಕ್‌ಗೆ ಹೋಗಿ ಅವರಿಂದ ಮೊಬೈಲ್ ಫೋನ್ ಪಡೆದು ಕರೆ ಮಾಡಿ, ಹೆಣವನ್ನು ಶಿಕ್ಷಕ ರವಿ ತನ್ನ ಗೆಳೆಯನ ಬೈಕ್‌ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸಾಗಿಸಿರುವುದಾಗಿ ಮಾಹಿತಿ ನೀಡಿದ್ದಾಳೆಂದು ತಿಳಿಸಿದರು.

ಅನಾರೋಗ್ಯ ಸಮಸ್ಯೆ ಇರುವ ನನ್ನನ್ನು ಕಂಡಾಗೆಲ್ಲಾ ಮಗಳು ಜೈಬುನ್ನೀಸಾ, `ನಾನು ದೊಡ್ಡವಳಾದ ಮೇಲೆ ಡಾಕ್ಟರ್ ಆಗುತ್ತೇನೆ. ಈ ಶಾಲೆಯಲ್ಲಿ ಕಲಿತ ಮಕ್ಕಳು ಶೇ. 70ರಷ್ಟು ಅಂಕ ಪಡೆದರೂ ಉನ್ನತ ಶಿಕ್ಷಣಕ್ಕೆ ಅಮೆರಿಕಕ್ಕೆ ಕಳುಹಿಸುತ್ತಾರೆ. ನಿಮ್ಮ ಖಾಯಿಲೆಯನ್ನು ನಾನೇ ಗುಣಮಾಡುತ್ತೇನೆ’ ಎಂದು ಪದೇ ಪದೇ ಹೇಳುತ್ತಿದ್ದಳು. ಆದರೆ ಕೊಲೆಗಡುಕರು ನನ್ನ ಮಗಳ ಜೀವವನ್ನೇ ಬಲಿತೆಗೆದುಕೊಂಡರು’ ಎಂದು ಅವರು ಗದ್ಗದಿತರಾದರು.

ದೈಹಿಕ ಶಿಕ್ಷಕ ರವಿಗೆ ಗಲ್ಲು ಶಿಕ್ಷೆಯಾಗಬೇಕು. ಉಳಿದಂತೆ ಆತನಿಗೆ ಸಹಕಾರ ನೀಡಿದ ಶಿಕ್ಷಕಿಯರನ್ನೂ ಬಂಧಿಸಬೇಕು. ತನಗೆ ಪರಿಹಾರ ಬೇಡ ನ್ಯಾಯ ಕೊಡಿ ಎಂದು ಮನವಿ ಮಾಡಿದರು.

Comments are closed.