ಕರಾವಳಿ

ವಿವಾದಾತ್ಮಕ ಹೇಳಿಕೆ : ವಿ‌ಎಚ್‌ಪಿ ಮುಖಂಡ ಜಗದೀಶ್ ಶೇಣವ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು 

Pinterest LinkedIn Tumblr

ಮಂಗಳೂರು, ಜನವರಿ 31: ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ನಡೆದಿದ್ದ ಬಷೀರ್ ಹತ್ಯೆ ಪ್ರಕರಣವನ್ನು ಸಮರ್ಥಿಸಿ ವಿವಾದಿದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ನಡೆದ ಬಶೀರ್ ಹತ್ಯೆಯನ್ನು ಸಮರ್ಥಿಸಿ ಕಾರ್ಯಕ್ರಮವೊಂದರಲ್ಲಿ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅನಂತ ಮುರ್ಡೇಶ್ವರ ಅವರು ದೂರು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 153 (ಎ), 116 ಸೆಕ್ಷನ್ಗಳಡಿಯಲ್ಲಿ ಜಗದೀಶ್ ಶೇಣವ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜ. 28ರಂದು ಮಂಗಳೂರಿನಲ್ಲಿ ನಡೆದ ಹಡೆದವ್ವನ ಶಾಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು, ಅಮಾಯಕ ದೀಪಕ್ ರಾವ್ ಗೆ ಪ್ರತೀಕಾರವಾಗಿ ಅಬ್ದುಲ್ ಬಷೀರ್ ಹತ್ಯೆಯಾಗಿದೆ. ಬಷೀರ್ ಹತ್ಯೆಯಾಗಿದ್ದಕ್ಕೆ ನಮಗೇನೂ ಚಿಂತೆಯಿಲ್ಲ .ಪ್ರತೀಕಾರಕ್ಕಾಗಿ ಮುಗ್ಧ ಹಿಂದೂಗಳ ಹತ್ಯೆಯಾಗಬೇಕಾದ್ರೆ ಬಷೀರ್ ಹತ್ಯೆ ಮಾಡ್ಬಾರ್ದಾ? ಹಿಂದುಗಳ ರಕ್ಷಣೆಗೆ ಒಂದು ವರ್ಗ ತಯಾರಾಗಿದೆ. ವಿಎಚ್ ಪಿ ಅಧ್ಯಕ್ಷ ನಾಗಿ ನಾನು ಬಷೀರ್ ಹತ್ಯೆಯನ್ನು ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದರು. ನನ್ನ ಈ ಹೇಳಿಕೆ ವಿರುದ್ಧ ಪ್ರಕರಣ ದಾಖಲಾದರೂ ನಾನು ಅದನ್ನು ಎದುರಿಸಲು ಸಿದ್ಧ ಎಂದು ಜಗದೀಶ್ ಶೇಣವ ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದರು.

ಜನವರಿ‌ 3ರಂದು ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಬವರನ್ನು ದುಷ್ಕರ್ಮಿಗಳು ಹಾಡುಹಗಲೇ ಹರಿತವಾದ ಅಯುಧಗಳಿಂದ ಕಡಿದು ಹತ್ಯೆ ಮಾಡಿದ್ದರು. ಅದೇ ದಿನ ರಾತ್ರಿ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಅಬ್ದುಲ್ ಬಷೀರ್ ಅವರ ಮೇಲೆ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಷೀರ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

Comments are closed.