ಕರಾವಳಿ

ಎತ್ತಿನಹೊಳೆ ವಿರುದ್ಧ ವಿಭಿನ್ನ ಹೋರಾಟ : ಸಹ್ಯಾದ್ರಿ ಸಂಚಯದಿಂದ ಪಕ್ಷೇತರ ಅಭ್ಯರ್ಥಿ Or ನೋಟಾ..

Pinterest LinkedIn Tumblr

ಮಂಗಳೂರು, ಜನವರಿ. 23: ಜಿಲ್ಲೆಯ ಅಭಿವೃದ್ಧಿಗೆ ಮಾರಾಕವಾಗುವಂತಹ ತೀರ್ಮಾನ ಕೈಗೊಳ್ಳುವ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಹ್ಯಾದ್ರಿ ಸಂಚಯದ ವತಿಯಿಂದ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಲಾಗಿದೆ ಎಂದು ಸಂಚಯದ ಸಂಚಾಲಕ ದಿನೇಶ್ ಹೊಳ್ಳ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಬರಿದುಗೊಳಿಸುವ ಎತ್ತಿನಹೊಳೆಯಂತಹ ಮಾರಕ ಯೋಜನೆಗಳನ್ನು ಭವಿಷ್ಯದಲ್ಲಿ ಜಾರಿಗೊಳಿಸುವಾಗ ಜನಪ್ರತಿನಿಧಿಗಳು ಆಲೋಚನೆ ಮಾಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸೂಕ್ತ ಅಭ್ಯರ್ಥಿ ದೊರೆತರೆ ಜಿಲ್ಲೆಯ 2,3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷೇತರರನ್ನಾಗಿ ನಿಲ್ಲಿಸುತ್ತೇವೆ. ಇದು ಕೂಡ ಎತ್ತಿನಹೊಳೆ ವಿರೋಧಿ ಹೋರಾಟದ ಭಾಗವೇ ಆಗಿದೆ. ನಮ್ಮ ಅಭ್ಯರ್ಥಿಗಳಿಗೆ ದೊರೆಯುವ ಮತಗಳು ನಿರ್ಣಾಯಕ ಮತಗಳಾಗಿ ಪರಿವರ್ತನೆಯಾಗಲಿವೆ ಎಂದು ಹೇಳಿದರು.

ಒಂದು ವೇಳೆ ಸೂಕ್ತ ಅಭ್ಯರ್ಥಿ ದೊರೆಯದಿದ್ದಲ್ಲಿ ನೋಟಾ ಅಭಿಯಾನದ ಮೂಲಕ ಪ್ರತಿರೋಧ ಒಡ್ಡಲಾಗುವುದು. ನಮ್ಮ ನೋಟಾ ಅಭಿಯಾನದ ಫಲವಾಗಿ ಕಳೆದ ಸಂಸತ್ ಚುನಾವಣೆಯಲ್ಲಿ 7800 ನೋಟಾ ಮತಗಳು ಚಲಾವಣೆಯಾಗಿದ್ದವು. ಕಳೆದ ಪಂಚಾಯತ್ ಚುನಾವಣೆಯಲ್ಲಿ 28 ಸಾವಿರ ಮತಗಳು ಬಿದ್ದಿದ್ದವು. ಈ ಬಾರಿ ಇನ್ನೂ ಅಧಿಕ ಮತಗಳು ದೊರೆಯುವ ನಿರೀಕ್ಷೆಯಿದೆ ಎಂದು ದಿನೇಶ್ ಹೊಳ್ಳ ಹೇಳಿದರು.

ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧ ಚುನಾವಣೆಯಲ್ಲಿ ನೋಟಾ ಮತ ಚಲಾವಣೆ ಅಭಿಯಾನದ ಭಾಗವಾಗಿ ವಿನೂತನ ಕಾರ್ಯತಂತ್ರಕ್ಕೆ ಸಹ್ಯಾದ್ರಿ ಸಂಚಯ ಮುಂದಾಗಿದೆ. ಜಿಲ್ಲೆಯ ಮನೆಗಳ ಗೇಟ್ ಗೆ ‘ನೇತ್ರಾವತಿಯನ್ನು ರಕ್ಷಿಸಲಾಗದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಯಾವುದೇ ರಾಜಕಾರಣಿಗಳು ಮತ ಕೇಳಲು ಬರಬೇಡಿ, ನಿಮಗೆ ನಮ್ಮ ಮತ ಬಹಿಷ್ಕಾರ ಮತ್ತು ಧಿಕ್ಕಾರ’ ಎಂಬ ಒಕ್ಕಣೆಯುಳ್ಳ ಬೋರ್ಡ್ ಅಳವಡಿಸಲಾಗುವುದು. ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ನೀಡಲಾಗುವುದು ಎಂದು ದಿನೇಶ್ ಹೊಳ್ಳ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹ್ಯಾದ್ರಿ ಸಂಚಯದ ಪದಾಧಿಕಾರಿಗಳಾದ ಶಶಿಧರ ಶೆಟ್ಟಿ, ಪವನ್, ಹರೀಶ್ ಅಡ್ಯಾರ್, ಜಗದೀಶ್ ಸಾಲ್ಯಾನ್, ರಾಜೇಶ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

Comments are closed.