ಮಂಗಳೂರು ಜನವರಿ 17 : ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣಾ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಪ್ರಾಥಮಿಕ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಂಬರುವ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತ ರೀತಿಯಲ್ಲಿ ನಡೆಸಲು ಚುನಾವಣಾ ಆಯೋಗ ಕಟಿಬದ್ದವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಪರವಾಗಿ ಜಿಲ್ಲಾಡಳಿತದೊಂದಿಗೆ ವ್ಯವಹರಿಸಲು ಜವಾಬ್ದಾರಿಯುತ ವ್ಯಕ್ತಿಯನ್ನು ನೇಮಿಸಬೇಕು. ಚುನಾವಣಾ ಆಯೋಗ ಆಗಿಂದಾಗ್ಗೆ ಹೊರಡಿಸುವ ಆದೇಶ, ಸುತ್ತೋಲೆಗಳನ್ನು ಇವರ ಮೂಲಕ ರಾಜಕೀಯ ಪಕ್ಷಗಳಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಈ ಸಲ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳೊಂದಿಗೆ ವಿ.ವಿ ಪ್ಲಾಟ್‍ಗಳನ್ನು ಬಳಸಲಾಗುವುದು. ಈ ವಿವಿ ಪ್ಲಾಟ್‍ಗಳಲ್ಲಿ ಮತದಾರನು ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬ ವಿವರ ಮುದ್ರಣವಾಗಿ ಬರುತ್ತದೆ. ಆದರೆ ಕೇವಲ 2 ಸೆಕೆಂಡಗಳು ಮಾತ್ರ ಈ ವಿವರ ಗೋಚರವಾಗಲಿದ್ದು, ಬಳಿಕ ಅದು ಬಾಕ್ಸ್‍ನೊಳಗೆ ಹೋಗಲಿದೆ. ಇದರಿಂದ ಮತದಾರನಿಗೆ ಖಚಿತ ವಿವರ ತಿಳಿಯಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಬದಲಾಯಿಸಲು ಹಾಗೂ ತಿದ್ದುಪಡಿ ಮಾಡಲು ಜನವರಿ 22 ರವರೆಗೆ ಕಾಲಾವಕಾಶ ಇದೆ. ಮತದಾರರು ಹಾಗೂ ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಇದರಿಂದ ಚುನಾವಣೆ ದಿವಸ ಉಂಟಾಗುವ ಗೊಂದಲ ಪರಿಹಾರವಾಗಲಿದೆ ಎಂದು ಸಸಿಕಾಂಥ್ ಸೆಂಥಿಲ್ ಹೇಳಿದರು. ಮತದಾರರ ಪಟ್ಟಿ ಪರಿಷ್ಕರಿಣೆಗೆ ಬೂತ್ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಬೇಕು. ಇಲ್ಲವಾದರೆ ಅಂಥವರ ವಿರುಧ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಾರ್ವಜನಿಕ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಕುವುದನ್ನು ನಿಯಂತ್ರಿಸಬೇಕು. ಇದರಿಂದ ಯಾವುದೇ ರೀತಿ ಅಹಿತಕರ ಘಟನೆ ನಿಯಂತ್ರಣವಾಗುವುದಲ್ಲದೇ, ರಾಜಕೀಯ ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಖರ್ಚು ವೆಚ್ಚ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಪ್ರಚಾರ ಕಾರ್ಯಗಳಿಗೆ ಅನುಮತಿ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ತರಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧೀಕಾರಿ ಕುಮಾರ್ ಮಾಹಿತಿ ನೀಡಿದರು. ವಿವಿಧ ರಾಜಕೀಯ ಪಕ್ಷ ಮುಖಂಡರಾದ ಸದಾಶಿವ ಉಳ್ಳಾಲ್, ಧೀರಜ್ ಪಾಲ್, ಮುಹಮ್ಮದ್ ಹನೀಫ್(ಕಾಂಗ್ರೆಸ್), ರವೀಂದ್ರ ಕುಮಾರ್(ಬಿಜೆಪಿ) ಹಾಗೂ ವಸಂತ ಪೂಜಾರಿ (ಜಾತ್ಯತೀತ ಜನತಾದಳ ) ಉಪಸ್ಥಿತರಿದ್ದರು.
Comments are closed.