
ಮಂಗಳೂರು, ಜನವರಿ.16: ಭಾರತೀಯ ಜನತಾ ಪಕ್ಷದ ಪ್ರಚಾರ ಸಭೆ ಬ್ಯಾನರ್ ಗಳಲ್ಲಿ ದೈವ-ದೇವರ ಭಾವಚಿತ್ರ ಹಾಕಿಕೊಂಡು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಮುದಾಯವೊಂದರ ಮತ ಗಳಿಸಲು ಅಧಿಕೃತ ರಾಜಕೀಯ ವೇದಿಕೆಯಲ್ಲಿ ಕೋಟಿ ಚನ್ನಯರ ಭಾವಚಿತ್ರ ಬಳಸಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇದು ಸಮುದಾಯಕ್ಕೆ ಮಾಡಿರುವ ಅವಮಾನ. ಪಡುಮಲೆಯಲ್ಲಿ ದೇವಿ ವನ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಮೂಲಕ ಕಾಂಗ್ರೆಸ್ ಪಕ್ಷ ಸಮುದಾಯಕ್ಕೆ ಗೌರವ ನೀಡಿದೆ. ಆದರೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದರು.

ಪಕ್ಷದ ಪ್ರಚಾರ ಸಭೆಯ ಬ್ಯಾನರ್ ಗಳಲ್ಲಿ ದೈವ ದೇವರ ಭಾವಚಿತ್ರ ಹಾಕಿ ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಬದಲು ಬಿಜೆಪಿ ತಾಕತ್ತಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಲಿ ಎಂದು ಸಚಿವ ರೈ ಬಿಜೆಪಿಗೆ ಸವಾಲೆಸೆದರು.

ಬಿಜೆಪಿಯು ಕೋಟಿ-ಚೆನ್ನಯರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಚಿಹ್ನೆ ಇರುವ ಬ್ಯಾನರ್ನಲ್ಲಿ ದೈವ-ದೇವರ ಚಿತ್ರ ಬಳಸಿ ರಾಜಕೀಯ ಮಾಡುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್,ಮೇಯರ್ ಕವಿತಾ ಸನಿಲ್, ಕಾಂಗ್ರೆಸ್ ಹಿರಿಯ ನಾಯಕರಾದ ಬಿ.ಎಚ್. ಖಾದರ್, ಶಶಿಧರ ಹೆಗ್ಡೆ, ಮಿಥುನ್ ರೈ, ಸಬಿತಾ ಮಿಸ್ಕಿತ್, ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಲತೀಫ್ ಮತ್ತಿತ್ತರರು ಪ್ರತಿಭಟನ ಸಭೆಯಲ್ಲಿ ಪಾಲ್ಗೊಂಡಿದ್ದರು.
Comments are closed.