ಕರಾವಳಿ

ಮಂಗಳೂರಿನಲ್ಲಿ 6.90 ಕೋಟಿ ರೂ. ವೆಚ್ಚದ ಪೊಲೀಸ್ ವಸತಿಗೃಹ ಕಟ್ಟಡಕ್ಕೆ ಗೃಹ ಸಚಿವರಿಂದ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು, ಜನವರಿ.12: ರಾಜ್ಯ ಸರಕಾರ ಪೊಲೀಸ್ ವಸತಿ ಗೃಹ 2020 ಯೋಜನೆಯಡಿ ಐದು ವರ್ಷದಲ್ಲಿ ವಿವಿಧ ಜಿಲ್ಲೆಗಳಲ್ಲಿ 11,000 ವಸತಿ ಗೃಹ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. 2500 ಕ್ಕೂ ಅಧಿಕ ಮನೆಗಳನ್ನು ಈಗಾಗಲೇ ಹಸ್ತಾಂತರಿಸ ಲಾಗಿದೆ. 4500 ಮನೆಗಳು ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಅವರು ಶುಕ್ರವಾರ ನಗರದ ಶಕ್ತಿನಗರದಲ್ಲಿ 6.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಪೊಲೀಸ್ ವಸತಿಗೃಹಗಳ ಕಟ್ಟಡಕ್ಕೆ ಶಿಲಾನ್ಯಾಸಗೈದು ಮಾತನಾಡಿದರು. ಮಂಗಳೂರಿನಲ್ಲಿ ಈ ನೂತನ ವಸತಿಗೃಹವು 24 ಪಿಸಿ ಹಾಗೂ 8 ಎಸ್‌ಐಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ವರ್ಷ 4500 ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮಂಗಳೂರು ನಗರದಲ್ಲಿ ಒಟ್ಟು 160 ವಸತಿಗೃಹ ಮಂಜೂರಾಗಿದ್ದು, ನಿರ್ಮಾಣ ಕೆಲಸ ನಡೆಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಹೊಸ ಮನೆಗಳ ನಿರ್ಮಾಣದ ಜತೆಗೆ ಹಳೆಯ ಮನೆಗಳ ದುರಸ್ತಿಗೆ ಆದ್ಯತೆ ನೀಡಲಾಗುತ್ತಿದೆ. 16 ತಿಂಗಳಲ್ಲಿ ಈ ವಸತಿಗೃಹದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 28 ಸಾವಿರ ಪೊಲೀಸ್ ಸಿಬ್ಬಂದಿಗಳ ನೇಮಕವಾಗಿದೆ. 1,642 ಪಿಎಸ್‌ಐ ಹುದ್ದೆಗಳ ಭರ್ತಿಯಾಗಿದೆ. ಇನ್ನೂ 18,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡು ಅನುಮತಿ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿಗೆ ವಿಶೇಷ ಆದ್ಯತೆ ನೆಲೆಯಲ್ಲಿ ನೇಮಕಾತಿ ಮಾಡಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್. ಲೋಬೋ, ಮಂಗಳೂರು ಮೇಯರ್ ಕವಿತಾ ಸನಿಲ್, ಸ್ಥಳೀಯ ಮನಪಾ ಸದಸ್ಯೆ ಅಖಿಲಾ ಆಳ್ವಾ, ಕಾರ್ಪೊರೇಟರ್ ಭಾಸ್ಕರ್ ಮೊಯ್ಲಿ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ. ಸುಧೀರ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

ಶಿಲಾನ್ಯಾಸ ಕಾರ್ಯಕ್ರಮದ ಆರಂಭಕ್ಕೂ ಮೊದಲು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

Comments are closed.