ಕರಾವಳಿ

ಕದ್ರಿ ಪಾರ್ಕ್‌ನಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ ಉದ್ಘಾಟನೆ : ಮತ್ತೆ ಓಡಾಟ ಆರಂಭಿಸಿದ ಪುಟಾಣಿ ರೈಲು

Pinterest LinkedIn Tumblr

ಮಂಗಳೂರು, ಜನವರಿ.8: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕದ್ರಿ ಜಿಂಕೆ ಉದ್ಯಾನವನದಲ್ಲಿ ನಿರ್ಮಿಸಿದ ಸಂಗೀತ ಕಾರಂಜಿ, ಲೇಸರ್ ಶೋ, ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲು ಮತ್ತು ಉದ್ಯಾನವನದ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ರಾತ್ರಿ ಚಾಲನೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಗೀತ ಕಾರಂಜಿ, ಲೇಸರ್ ಶೋ ಹಾಗೂ ಪುಟಾಣಿಗಳ ಬಾಲಮಂಗಳ ಎಕ್ಸ್ ಪ್ರೆಸ್ ರೈಲಿಗೆ ರವಿವಾರ ರಾತ್ರಿ ಚಾಲನೆ ನೀಡಿದರು. ಈ ಮೂಲಕ ನಗರದ ಕದ್ರಿ ಪಾರ್ಕ್ ನಲ್ಲಿ ಕಳೆದ 5 ವರ್ಷಗಳಿಂದ ಓಡಾಟ ನಿಲ್ಲಿಸಿದ್ದ ಬಾಲಮಂಗಳ ಎಕ್ಸ್ ಪ್ರೆಸ್ ಪುಟಾಣಿ ರೈಲು ಮತ್ತೆ ತನ್ನ ಓಡಾಟ ಆರಂಭಿಸಿದೆ.

ಭಾನುವಾರ ಬೆಳ್ತಂಗಡಿ, ಪುತ್ತೂರು ಹಾಗೂ ಮೂಡಬಿದ್ರೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಕದ್ರಿ ಉದ್ಯಾನವನದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉಡ್ಗಾಟಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಸುರೇಶ್ ಬಳ್ಳಾಲ್, ಪ್ರಾಧಿಕಾರದ ಆಯುಕ್ತ ಶ್ರೀಕಾಂತ್ ರಾವ್ ಕೆ., ಮೇಯರ್ ಕವಿತಾ ಸನಿಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಹರ್ ಪಿ.ಕಳಸ್, ಸದಸ್ಯರಾದ ಕೇಶವ ಸನಿಲ್, ಶೋಭಾ, ಎಚ್.ವಸಂತ್ ಬೆರ್ನಾಡ್, ಮುರಳಿ ಮೋಹನ್ ಸಾಲಿಯಾನ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯ್ಕಾ, ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರಿನ ಪ್ರಥಮ ಸಂಗೀತ ಕಾರಂಜಿ : ವೈವಿಧ್ಯಮಯ ಲೈಟಿಂಗ್

ಮಂಗಳೂರಿನ ಪ್ರಥಮ ಸಂಗೀತ ಕಾರಂಜಿಯ ಉದ್ಘಾಟನೆಗೆ ಕರಾವಳಿಗರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನೂತನವಾಗಿ ಈ ರಾಜೀವ ಗಾಂಧಿ ಸಂಗೀತ ಕಾರಂಜಿ ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಿಸಲಾದ ಸಂಗೀತ ಕಾರಂಜಿಯ ಮೂಲಕ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸೇರಿದಂತೆ ಭವ್ಯ ಇತಿಹಾಸವನ್ನು ಪರಿಚಯಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಪ್ರತಿ ದಿನ ಸಂಜೆ 7:30 ಕ್ಕೆ ಸಾರ್ವಜನಿಕರು ಈ ಸಂಗೀತ ಕಾರಂಜಿ ಕಾರ್ಯಕ್ರಮವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.

Comments are closed.