
ಮಂಗಳೂರು, ಜನವರಿ.7: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ಹತ್ಯೆ ನಡೆದ ಬಳಿಕ ನಗರದ ಕೊಟ್ಟಾರ ಚೌಕಿ ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ದಾಳಿಗೊಳಗಾಗಿದ್ದ ಆಕಾಶಭವನ ನಿವಾಸಿ ಬಶೀರ್(47) ಅವರು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಜ.3ರಂದು ರಾತ್ರಿ 9:30ರ ಸುಮಾರಿಗೆ ಕೊಟ್ಟಾರ ಚೌಕಿ ಬಳಿಯಿರುವ ತನ್ನ ಫಾಸ್ಟ್ಫುಡ್ ಹೋಟೆಲ್ನಲ್ಲಿ ನಾಲ್ವರು ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ತಲವಾರು ದಾಳಿಗೆ ಒಳಗಾಗಿದ್ದರು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸತತ 17 ಬಾರಿ ಬಶೀರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ರಸ್ತೆಬದಿಯಲ್ಲಿ ಬಿದ್ದಿದ್ದ ಬಷೀರ್ ಅವರನ್ನು ಶೇಖರ್ ಮತ್ತು ರಾಹುಲ್ ಎಂಬ ಯುವಕರು ಎ.ಜೆ. ಆಸ್ಪತ್ರೆಗೆ ಸೇರಿಸಿದ್ದರು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ತಲೆ, ಎದೆಗೆ ಗಂಭೀರ ಗಾಯಗಳಾಗಿದ್ದವು. ಅವರ ಕಿಡ್ನಿ ವೈಫಲ್ಯಗೊಂಡಿತ್ತು. ಇದರಿಂದ ಸತತ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದ ಅವರ ಸ್ಥಿತಿ ಚಿಂತಾಜನಕವಾಗಿಯೇ ಮುಂದುವರಿದಿತ್ತು. ಕಳೆದ 4 ದಿನಗಳಿಂದ ನಗರದ ಎ.ಜೆ. ಆಸ್ಪತ್ರೆಯಲ್ಲಿ ಬಷೀರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಬಷೀರ್ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಿಗ್ಗೆ 8.10ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕಾಟಿಪಳ್ಳದಲ್ಲಿ ಜ.3ರಂದು ಮಧ್ಯಾಹ್ನ ದೀಪಕ್ ರಾವ್ ಹತ್ಯೆ ನಡೆದಂದೇ ರಾತ್ರಿ ಬಶೀರ್ ಅವರ ಮೇಲೂ ಮಾರಣಾಂತಿಕ ದಾಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿತ್ತು. ಅಮಾಯಕರಾಗಿದ್ದ ಬಶೀರ್ ಅವರ ಪರಿಚಯವೇ ಇಲ್ಲದ ದುಷ್ಕರ್ಮಿಗಳು ಕೇವಲ ಪ್ರತೀಕಾರದ ಕಾರಣಕ್ಕೆ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದರು.
ಇದೀಗ ಘಟನೆಯಿಂದ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರಿನಾದ್ಯಂತ ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
Comments are closed.