ಕರಾವಳಿ

ದೀಪಕ್ ಹತ್ಯಾ ಆರೋಪಿಗಳ ತೀವ್ರ ವಿಚಾರಣೆ : ಕೊಲೆ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ

Pinterest LinkedIn Tumblr

ಮಂಗಳೂರು, ಜನವರಿ 5: ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿದ್ದು, ಬಂಧಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಹೆಚ್ಚಿನ ತನಿಖೆ ಮೂಲಕ ಹತ್ಯೆಯ ನಿಜವಾದ ಕಾರಣ ತಿಳಿದು ಬರಲಿದೆ ಎಂದು ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಕಾವೇರಿ ರಸ್ತೆಯ ಚೆಕ್‌ಪೋಸ್ಟ್ ಬಳಿ ವೇಗವಾಗಿ ಹೋಗುತ್ತಿದ್ದಾಗ ಹೋಮ್‌ಗಾರ್ಡ್‌ ಒಬ್ಬರು ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಸಬ್ಇನ್ಸ್‌ಪೆಕ್ಟರ್ ಶೀತಲ್‌ಕುಮಾರ್, ಮೂವರು ಸಿಬ್ಬಂದಿ ಖಾಸಗಿ ಕಾರಿನಲ್ಲಿ ಬೆನ್ನಟ್ಟಿದ್ದರು. ಈ ವೇಳೆ ಮಿಜಾರಿನಲ್ಲಿ ಪೊಲೀಸರು ಫೈರಿಂಗ್ ಮಾಡಿ ಆರೋಪಿಗಳನ್ನು ಅಡ್ಡಗಟ್ಟಿ, ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಡಿಜಿಪಿ ಯವರು ಹೇಳಿದರು.

ಫೈರಿಂಗ್ ಮಾಡುವಾಗ ಆರೋಪಿಗಳಾದ ಪಿಂಕಿ ನವಾಜ್, ರಿಜ್ವಾನ್‌ಗೆ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಾದ ಮೂಲ್ಕಿ ನೌಷಾದ್, ರಿಜ್ವಾನ್, ನಿರ್ಷಾದ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಾದ ಪಿಂಕಿ ನವಾಜ್ ವಿರುದ್ಧ 10 ಪ್ರಕರಣ, ರಿಜ್ವಾನ್ ವಿರುದ್ಧ 2 ಪ್ರಕರಣ, ನೌಷಾದ್ ಮೇಲೆ 1 ಪ್ರಕರಣ, ನಿರ್ಷಾನ್ ಮೇಲೆ 1 ಪ್ರಕರಣ ಈ ಮೊದಲೇ ದಾಖಲಾಗಿವೆ. ಈ ಹತ್ಯೆಗೆ ನಿಜವಾದ ಕಾರಣ ತನಿಖೆಯಿಂದ ತಿಳಿದುಬರಲಿದೆ ಎಂದರು.

ಬಂಟಿಂಗ್ಸ್ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎಂದು ದೂರು ದಾಖಲಿಸಿದವರು ಹೇಳುತ್ತಿದ್ದು, ಹೆಚ್ಚಿನ ತನಿಖೆಯ ಬಳಿಕ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದವರು ಹೇಳಿದರು. ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, 10 ಸಿ.ಆರ್.ಐ.ಪಿ, 3 ಎಸ್ಪಿ, 1 ಎ.ಎಸ್ಪಿ, 400 ಪೊಲೀಸರು ಹಾಗೂ ಇನ್ನೂ ಹೆಚ್ಚಿನ ಪೊಲೀಸರನ್ನು ನಗರದಾದ್ಯಂತ ನಿಯೋಜಿಸಲಾಗಿದೆ ಎಂದು ಎಡಿಜಿಪಿ ಅವರು ಹೇಳಿದರು.

ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಗಳ‌ನ್ನು ಬಂಧಿಸಿದ ಮಂಗಳೂರು ಪೊಲೀಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಎಡಿಜಿಪಿ ಕಮಲ್ ಪಂತ್ 1.20 ಲಕ್ಷ ರೂಪಾಯಿ ಬಹುಮಾನ ವಿತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುರೇಶ್,ದ.ಕ.ಜಿಲ್ಲಾ ಎಸ್ಪಿ ಸುಧೀರ್‌ ಕುಮಾರ್ ರೆಡ್ಡಿ, ಡಿ.ಸಿ.ಪಿ ಉಮಾಪ್ರಶಾಂತ್ ಹಾಗೂ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.