
ಮಂಗಳೂರು, ಡಿಸೆಂಬರ್ 30 : ದೇಶದ ಪ್ರಥಮ ಇಂಕ್ಯುಬೇಶನ್ ಸೆಂಟರ್(ಉದ್ಯಮ ಶೀಲತೆ ಅವಕಾಶ ಮತ್ತು ಕಲಿಕಾ ಕೇಂದ್ರ)ನ್ನು ನಗರದ ಕದ್ರಿಯ ಮಂಗಳೂರು ಮಹಾನಗರ ಪಾಲಿಕೆಯ ಉಪ ಕಚೇರಿ ಕಟ್ಟಡದಲ್ಲಿ ನಿರ್ಮಿಸಲಾಗಿದ್ದು, ಶುಕ್ರವಾರ ಉದ್ಘಾಟನೆಗೊಂಡಿತ್ತು.

ಹೊಸ ಹೊಸ ಆಲೋಚನೆಗಳನ್ನು ಹೊತ್ತ ಯುವ ಇಂಜಿನಿಯರ್ ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ನೆರವಾಗುವ ದೇಶದ ಮೊದಲ ಸ್ಟಾರ್ಟಪ್ ಇನ್‍ಕ್ಯುಬೇಶನ್ ಕೇಂದ್ರವನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ನಗರದ ಕದ್ರಿಯ ಮಂಗಳೂರು ಮಹಾನಗರ ಪಾಲಿಕೆಯ ಉಪ ಕಚೇರಿಯಲ್ಲಿ ಆರಂಭಗೊಂಡಿರುವ ಇಂಕ್ಯುಬೇಶನ್ ಸೆಂಟರ್ನಲ್ಲಿ ಪ್ರಸ್ತುತ 60 ಅಭ್ಯರ್ಥಿಗಳು ತರಬೇತಿ ಹಾಗೂ ಮಾರ್ಗದರ್ಶನ ಪಡೆಯಬಹುದಾಗಿದೆ. ಮುಂದೆ ಜಿಲ್ಲಾಡಳಿತವು ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ 40 ಸೀಟುಗಳನ್ನು ಒದಗಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದರು.

ತಮ್ಮ ಸಂಸದ ನಿಧಿಯಿಂದ 1.50 ಕೋಟಿ ರೂ.ಗಳನ್ನು ಈ ಸೆಂಟರ್ಗಾಗಿ ಒದಗಿಸಿದ್ದು, ಹೊಸ ಉದ್ಯಮ ಆರಂಭಿಸುವವರಿಗೆ ಅಗತ್ಯ ತರಬೇತಿ, ಮಾರ್ಗದರ್ಶನ ಮತ್ತು ಮೂಲ ಸೌಕರ್ಯವನ್ನು ಈ ಕೇಂದ್ರದ ಮೂಲಕ ಒದಗಿಸಲಾಗುತ್ತದೆ.ಸಂಸದರ ನಿಧಿಯನ್ನು ರಸ್ತೆ, ಕುಡಿಯುವ ನೀರು ಮೊದಲಾದ ಮೂಲಭೂತ ಅಭಿವೃದ್ಧಿಗೆ ಒದಗಿಸಲಾಗುವುದು, ಆದರೆ ಶಿಕ್ಷಣ ಕಾಶಿಯಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾವಂತರು ಐಟಿ- ಬಿಟಿಗಾಗಿ ಬೆಂಗಳೂರು ಅಥವಾ ಹೊರ ರಾಜ್ಯಗಳಿಗೆ ಮುಖ ಮಾಡುವುದನ್ನು ತಪ್ಪಿಸಿ ಅವರನ್ನು ಸ್ಥಳೀಯವಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಸ್ಥಳೀಯ ಸಂಸದರ ಕೋರಿಕೆಯ ಮೇರೆಗೆ ತಾವು ಈ ಕೇಂದ್ರವನ್ನು ಇಲ್ಲಿ ಆರಂಭಿಸಿರುವುದಾಗಿ ಹೇಳಿದರು.

“ಕೇಂದ್ರದ ಸ್ಟಾರ್ಟಪ್ ಯೋಜನೆಯತ್ತ ಈಗ ಜಗತ್ತೇ ತಿರುಗಿ ನೋಡುತ್ತಿದೆ. ಸಣ್ಣ ಉದ್ದಿಮೆಯಿಂದ ತೊಡಗಿ ದೊಡ್ಡ ಕೈಗಾರಿಕೆ ಸ್ಥಾಪನೆಯವರೆಗೆ ಸ್ಟಾರ್ಟಪ್ ನೆರವಾಗುತ್ತದೆ. ಬೆಂಗಳೂರಿಗೆ ಪರ್ಯಾಯವಾಗಿ ಮಂಗಳೂರನ್ನು ಐಟಿ ವಲಯದಲ್ಲಿ ಬೆಳೆಸಲು ಈ ಕೇಂದ್ರ ಪ್ರಯೋಜನಕಾರಿಯಾಗಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಕೇಂದ್ರ ಕೇವಲ ಯಾಂತ್ರೀಕೃತವಾಗಿ ಕಾರ್ಯ ನಿರ್ವಹಿಸಲು ಸೀಮಿತವಾಗದೆ, ಸ್ಟಾರ್ಟಪ್ ಗಳ ಜೊತೆಗೆ ಸಂವಾದಕ್ಕೆ ವೇದಿಕೆಯಾಗಬೇಕು. ಇಲ್ಲಿಗೆ ಬಂಡವಾಳ ಹೂಡಿಕೆ ಆಗಬೇಕು. ಕೈಗಾರಿಕೋದ್ಯಮಿಗಳು ಬಂದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಟಾರ್ಟಪ್ ಗಳೊಂದಿಗೆ ಮಾತುಕತೆ ನಡೆಸಬೇಕು. ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ರಂಗದ ಅನುಭವಿಗಳು ತಮ್ಮ ಸಲಹೆ ಸೂಚನೆಗಳನ್ನು ಸ್ಟಾರ್ಟಪ್ ಗಳಿಗೆ ನೀಡಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಕೆರೆ ನೀಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಇಂಕ್ಯುಬೇಶನ್ ಸೆಂಟರ್ಗೆ ಭೇಟಿ ನೀಡಿ ಇದರ ಪ್ರಯೋಜನವನ್ನು ಅರಿತುಕೊಂಡು ಇದರ ಉಪಯೋಗಕ್ಕೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಈ ಸೆಂಟರ್ನಲ್ಲಿ ಉದ್ಯಮಕ್ಕೆ ಮುಂದಾಗುವವರಿಗೆ ಸೂಕ್ತ ತರಬೇತಿಯ ಜತೆಗೆ ಹಣಕಾಸಿನ ನೆರವನ್ನು ಒದಗಿಸುವುದು ಹಾಗೂ ಸಂಬಂಧಪಟ್ಟ ಕ್ಷೇತ್ರಗಳ ತಜ್ಞ ವೃತ್ತಿಪರರಿಂದ ಅಭ್ಯರ್ಥಿಗಳಿಗೆ, ಉದ್ಯಮಕ್ಕೆ ಬೇಕಾದ ಸಲಹೆಗಳನ್ನು ಒದಗಿಸುವ ನಿಟ್ಟಿನಲ್ಲಿ ತಿಂಗಳಿಗೆ ಮೂರು ಚಟುವಟಿಕೆಗಳು ನಿರತಂತರವಾಗಿ ನಡೆಯುತ್ತಿರಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಸ್ಟಾರ್ಟಪ್ ಇನ್‍ಕ್ಯುಬೇಶನ್ ಕೇಂದ್ರ ಸ್ಥಾಪನೆಗೆ ತಮ್ಮ ಸಂಸದೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1.50 ಕೋಟಿ ರು. ಮೊತ್ತವನ್ನು ವಾಣಿಜ್ಯ ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು,ಶಾಸಕ ಜೆ.ಆರ್. ಲೋಬೋ, ಜಿಲ್ಲಾ ಪಂಚಾಯತ್ನ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಗಣೇಶ್ ಕಾರ್ಣಿಕ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಸ್ವಾಗತಿಸಿದರು. ಕೆಸಿಸಿಐನ ಮಾಜಿ ಅಧ್ಯಕ್ಷ ಜೀವನ್ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.
Comments are closed.