ಕರಾವಳಿ

ರಾಷ್ಟ್ರ ಮಟ್ಟದ ರೋವರ್ಸ್ ರೇಂಜರ್ಸ್ ಸಮಾವೇಶಕ್ಕೆ ಚಾಲನೆ : 14 ರಾಜ್ಯಗಳ 740ಕ್ಕೂ ಹೆಚ್ಚು ಪ್ರತಿನಿಧಿಗಳ ಆಗಮನ

Pinterest LinkedIn Tumblr

ಮಂಗಳೂರು, ಡಿಸೆಂಬರ್. 29: ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಜನವರಿ 1ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ರೋವರ್ಸ್ ರೇಂಜರ್ಸ್ ಸಮಾವೇಶಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು,ರಾಷ್ಟ್ರೀಯ ಭಾವೈಕ್ಯತೆಯನ್ನು ಜನಮಾನಸದಲ್ಲಿ ಮೂಡಿಸಿ ಜಾತ್ಯತೀತ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ರೋವರ್ಸ್- ರೇಂಜರ್ಸ್ಗಳ ಪಾತ್ರ ಹಿರಿದು.ಸಮಾಜ ಸೇವೆಗೆ ವೇದಿಕೆಗಳು ಹಲವಿದ್ದರೂ, ಶಿಸ್ತು ಬದ್ಧವಾಗಿ ಗುರುತಿಸಿಕೊಂಡಿರುವ ಕೆಲ ಸಂಘಟನೆಗಳಲ್ಲಿ ರೋವರ್ಸ್ ರೇಂಜರ್ಸ್ ಕೂಡಾ ಪ್ರಮುಖ. ಇಂದು ಸಮಾಜದಲ್ಲಿ ನಡೆಯುತ್ತಿರುವ ಮತೀಯ ಕಲಹಗಳು ರಾಷ್ಟ್ರದ ಭಾವೈಕ್ಯತೆ ಹಾಗೂ ಅಖಂಡತೆಗೆ ತೊಂದರೆ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಶಿಸ್ತುಬದ್ಧವಾದ ಇಂತಹ ಸಂಘಟನೆಗಳಲ್ಲಿರುವ ಯುವ ಸಮುದಾಯದಿಂದ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿದೆ. ಯುವ ಪೀಳಿಗೆ ಇಡುವ ಹೆಜ್ಜೆಯಲ್ಲಿ ಭವಿಷ್ಯದ ಸುಂದರ ಭಾರತದ ಕಲ್ಪನೆ ಅಡಕವಾಗಿದೆ ಎಂದು ಹೇಳಿದರು.

ವಿ.ಪಿ. ದೀನ್ದಯಾಲ್ ನಾಯ್ಡು ಅವರ ಶತಮಾನೋತ್ಸವ ಸ್ಮರಣಾರ್ಥ ಜನವರಿ 1ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸುತ್ತಿರುವ ರೋವರ್ಸ್ ಮತ್ತು ರೇಜಂರ್ಸ್ ಪ್ರತಿನಿಧಿಗಳು ಸಾಹಸ ಕ್ರೀಡೆಗಳ ಜತೆ, ವೃತ್ತಿಪರ ಮಾರ್ಗದರ್ಶನ, ವಿಪತ್ತು ನಿರ್ವಹಣೆ, ಟ್ರೆಕ್ಕಿಂಗ್ ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ 1921ರಲ್ಲಿ ಸಂತ ಅಲೋಶಿಯಸ್ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಗೊಂಡಿತ್ತು. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಡಿ 45745 ಪ್ರತಿನಿಧಿಗಳಿದ್ದಾರೆ ಎಂದು ಕಾರ್ಯಕ್ರಮದ ನಾಯಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಷ್ಟ್ರೀಯ ಆಯುಕ್ತ ಅನಲೇಂದ್ರ ಶರ್ಮಾ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ನ ರಾಷ್ಟ್ರೀಯ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಎ. ಖಾಲಿದ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಉಪಾಧ್ಯಕ್ಷ ಕೊಂಡಾಜಿ ಬಿ. ಷಣ್ಮುಖಪ್ಪ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಜೆ.ಆರ್. ಲೋಬೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಿವಿ ರಿಜಿಸ್ಟ್ರಾರ್ ಯು. ಪ್ರಕಾಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಐರಿನ್ ಡಿಕುನ್ನಾ, ರಾಧಾ ವೆಂಕಟೇಶ್, ರಾಮಲತಾ ಮೊದಲಾದವರು ಉಪಸ್ಥಿತರಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಡಾ.ಎನ್.ಜಿ. ಮೋಹನ್ ಸ್ವಾಗತಿಸಿದರು. ವಿ.ಪಿ. ದೀನ್ದಯಾಲ್ ನಾಯ್ಡು ಅವರ ಶತಮಾನೋತ್ಸವ ಸಂಭ್ರಮದ ಸಂಚಾಲಕ ಎಂ.ಎ. ಚೆಳ್ಳಯ್ಯ ಪ್ರಾಸ್ತಾವನೆಗೈದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್ ವಂದಿಸಿದರು. ಪ್ರೊ. ಡಾ. ಮಾಧ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶಕ್ಕೆ 14 ರಾಜ್ಯಗಳ 739 ಪ್ರತಿನಿಧಿಗಳ ಆಗಮನ :

ಕಡಲ ನಗರಿ ಮಂಗಳೂರು ಮತ್ತೊಮ್ಮೆ ರಾಷ್ಟ್ರೀಯ ಸಮಾವೇಶಕ್ಕೆ ಸಾಕ್ಷಿಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನಡಿ ರೇಂಜರ್ಸ್ ಮತ್ತು ರೋವರ್ಸ್ಗಳ ರಾಷ್ಟ್ರೀಯ ಸಮಾವೇಶ ಗುರುವಾರದಿಂದ ಜನವರಿ 1ರವರೆಗೆ ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಇದರಲ್ಲಿ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಗುರುವಾರ ಸಂಜೆಯವರೆಗೆ ದೇಶದ 14 ರಾಜ್ಯಗಳ 739 ರೇಂಜರ್ಸ್ ಮತ್ತು ರೋವರ್ಸ್ಗಳು ಆಗಮಿಸಿದ್ದಾರೆ. ಬಿಹಾರ, ಮಣಿಪುರ ಹಾಗೂ ಛತ್ತೀಸ್ಗಡದ ಪ್ರತಿನಿಧಿಗಳು ರೈಲು ಪ್ರಯಾಣ ವಿಳಂಬಗೊಂಡ ಹಿನ್ನೆಲೆಯಲ್ಲಿ ತಡವಾಗಿ ಸಮಾವೇಶವನ್ನು ಸೇರಿಕೊಂಡಿದ್ದಾರೆ.

1000ದಷ್ಟು ಮಂದಿಗೆ ಫಲಾಹಾರ – ಊಟದ ವ್ಯವಸ್ಥೆ :

ಕರ್ನಾಟಕದ 583 ಪ್ರತಿನಿಧಿಗಳು (301 ರೋವರ್ಸ್ ಹಾಗೂ 270 ರೇಂಜರ್ಸ್) ಸೇರಿದಂತೆ ಸುಮಾರು 1000ದಷ್ಟು ಮಂದಿಗೆ ಅಗತ್ಯವಾದ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ದ.ಕ. ಜಿಲ್ಲಾಡಳಿತವು ಮಾಡುತ್ತಿದೆ. ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯ ಆವರಣದಲ್ಲೇ ಸುಮಾರು 10ಕ್ಕೂ ಅಧಿಕ ಮಂದಿ ಬಾಣಸಿಗರು ಬಿಸಿ ಬಿಸಿ ಫಲಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿರುವುದರಿಂದ ಅವರಿಗೆ ಪೂರಕವಾದ ಚಪಾತಿ ಹಾಗೂ ಪಲ್ಯಳನ್ನೂ ತಯಾರು ಮಾಡಲಾಗುತ್ತಿದೆ.

Comments are closed.