
ಮಂಗಳೂರು, ಡಿಸೆಂಬರ್.25: ಕರಾವಳಿಯಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಕ್ರೈಸ್ತ ಭಾಂದವರ ಪವಿತ್ರ ಹಬ್ಬ ಕ್ರಿಸ್‌ಮಸ್ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮನುಕುಲಕ್ಕೆ ಪ್ರೀತಿ, ದಯೆಯನ್ನೇ ಧಾರೆಯೆರೆದ ಯೇಸುಕ್ರಿಸ್ತನ ಜನ್ಮದಿನದ ಆಚರಣೆಯನ್ನು ಕ್ರೈಸ್ತ ಭಾಂಧವರು ನಿನ್ನೆ ರಾತ್ರಿಯಿಂದಲೇ ವಿವಿಧ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.

ಕರಾವಳಿಯ ಎಲ್ಲಾ ಚರ್ಚ್‌ಗಳಲ್ಲಿ ಕ್ಯಾರಲ್ಸ್‌ಗಳು ಮೊಳಗುತ್ತಿದ್ದು, ಕ್ರೈಸ್ತರು ತಮ್ಮ ಮನೆಗಳಲ್ಲಿ ಕ್ರಿಬ್, ಕ್ರಿಸ್‌ಮಸ್ ಟ್ರೀಯನ್ನಿಟ್ಟು ಯೇಸು ಮತ್ತೊಮ್ಮೆ ಹುಟ್ಟಿಬರಲೆಂದು ಆಶಿಸಿದರು. ದೇವಮಾನವ ಯೇಸು ಕ್ರಿಸ್ತನ ಹುಟ್ಟುಹಬ್ಬದ ಸಂತಸವನ್ನು ಎಲ್ಲರೊಂದಿಗೂ ಆಚರಿಸುವ ಕ್ರಿಸ್‌ಮಸ್ ಸಂದರ್ಭ ಕೇಕ್ ಜೊತೆಗೆ ಕುಕೀಸ್, ಅಕ್ಕಿ ರವೆಯ ಲಡ್ಡು, ವಿವಿಧ ರೀತಿಯ ಚಕ್ಕುಲಿಗಳು, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಸಣ್ಣ ಸಣ್ಣ ಗೋಲಿಯಾಕಾರದ ತಿನಿಸುಗಳ ಕಾಂಬಿನೇಶನ್ನೊಂದಿಗೆ ಅತಿಥಿಗಳಿಗೆ, ನೆರೆಹೊರೆಯವರಿಗೆ ಕುಸ್ವಾರ್ ಹಂಚುವುದು ಮಂಗಳೂರು ಕ್ರೈಸ್ತರ ಸಂಪ್ರದಾಯ.

ಕ್ರಿಸ್‌ಮಸ್ ಸಂದರ್ಭದಲ್ಲಿ ಅಲಂಕಾರವಾಗಿಡುವ ಗೋದಲಿ ಹಾಗೂ ಕ್ರಿಸ್‌ಮಸ್ ಟ್ರೀ ಮಂಗಳೂರಿನಲ್ಲೂ ಫೇಮಸ್. ಮರಿಯಾ ಮೇರಿ ಗೋದಲಿಯಲ್ಲಿ ಯೇಸುವಿಗೆ ಜನ್ಮ ನೀಡಿದ ಕಾರಣಕ್ಕಾಗಿ ಸಾಂಕೇತಿಕವಾಗಿ ಕ್ರಿಸ್‌ಮಸ್ ಸಂದರ್ಭದಲ್ಲಿ ಗೋದಲಿಯಿಟ್ಟು ಅಲಂಕಾರ ಮಾಡಲಾಗುತ್ತಿದೆ. ಯೇಸು ಮತ್ತೆ ಮತ್ತೆ ಹುಟ್ಟಿಬರಲೆಂಬ ಆಶಯ ಇದರಲ್ಲಿದೆ.
Comments are closed.