
ಮಂಗಳೂರು, ಡಿಸೆಂಬರ್.25: ರೌಡಿ ಶೀಟರ್ ಒಬ್ಬನನ್ನು ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ತಂಡದಿಂದ ಹತ್ಯೆಗೀಡಾದ ಯುವಕನನ್ನು ಗೋರಿಗುಡ್ಡೆ ನಿವಾಸಿ ರೌಡಿ ಶೀಟರ್ ಮೆರ್ಲಿಕ್ ಡಿಸೋಜ(26) ಎಂದು ಹೆಸರಿಸಲಾಗಿದೆ. ಈತ ರೌಡಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಎಂದು ಹೇಳಲಾಗಿದೆ.
2016ರಲ್ಲಿ ಸಂದೀಪ್ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿದ್ದ. ಈತನ ಮೇಲೆ ರೌಡಿ ಶೀಟರ್ ತೆರೆಯಲಾಗಿತ್ತು. ಎರಡು ದಿನಗಳ ಹಿಂದಷ್ಟೆ ಜೈಲಿನಿಂದ ಮೆರ್ಲಿಕ್ ಡಿಸೋಜಾ ಹೊರಬಂದಿದ್ದ ಎನ್ನಲಾಗಿದೆ. ಈತನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯೊಂದರಲ್ಲೇ 4 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ಮೆರ್ಲಿಕ್ ಡಿಸೋಜಾ ಮನೆಯಲ್ಲಿದ್ದಾಗ ಹೊಂಚು ಹಾಕಿ ಕುಳಿತಿದ್ದ ಐದು ಮಂದಿ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ಮನೆಗೆ ನುಗ್ಗಿ ಈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡು ಮೆರ್ಲಿಕ್ ಡಿಸೋಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸುದ್ದಿ ತಿಳಿದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ. ಯಾವ ಕಾರಣಕ್ಕಾಗಿ ಈತನನ್ನು ಕೊಲೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಗ್ಯಾಂಗ್ವಾರ್ ಅಥವಾ ಹಳೆ ದ್ವೇಷದ ಶಂಕೆ ವ್ಯಕ್ತವಾಗಿದೆ.ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.