ಕರಾವಳಿ

ತಾಯಂದಿರ ಒತ್ತಡ ರಹಿತ ಜೀವನ ನಡೆಸಲು ಸರಳಸೂತ್ರ

Pinterest LinkedIn Tumblr

ತಾಯಿಯಾಗುವುದು ಒಂದು ಕಡೆ ಸಂತೋಷದ ಸಂಗತಿಯಾದರೆ ಮತ್ತೊಂದು ಕಡೆ ತ್ರಾಸದಾಯಕ ಕೆಲಸವೆನಿಸುತ್ತದೆ. ಮನೆಯವರ ಆಗು ಹೋಗು, ಮಗುವಿನ ಪಾಲನೆ ಪೋಷಣೆ, ಗಂಡನ ಬೇಕು-ಬೇಡಗಳನ್ನು ಅರಿತು ಮುನ್ನಡೆಯುವವಳೇ ತಾಯಿ. ಮನೆಯ ಜವಾಬ್ಧಾರಿಯ ಮಧ್ಯೆ ತನ್ನನ್ನೇ ತಾನು ಮರೆತು ಹೋಗುತ್ತಾಳೆ. ತಾಯಿಯ ಕೆಲಸಗಳು ನೋಡಲು ಸುಲಭವೆನಿಸಿದರೂ, ಅದನ್ನು ನಿರ್ವಹಿಸಿದಾಗಲೇ ಅದರ ಕಷ್ಟಗಳ ಅರಿವಾಗುತ್ತದೆ. ತಂದೆಯ ಪಾತ್ರವು ಮುಖ್ಯ, ಆದರೆ ತಾಯಿಯ ಕೆಲಸಗಳನ್ನು, ತಾಯಿಯಲ್ಲದೆ ಬೇರೆ ಯಾರು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ತಾನೇ, ತಾಯಿಯನ್ನು ದೇವರ ಸ್ವರೂಪವೆನ್ನುವುದು! ತನಗಾಗಿ ಏನನ್ನು ಅಪೇಕ್ಷಿಸದೆ, ನಿಸ್ವಾರ್ಥ ಮನಸ್ಸಿನಿಂದ ಎಲ್ಲರನ್ನು ನೋಡಿಕೊಳ್ಳುವ ತಾಯಂದಿರೇ, ಸ್ವಲ್ಪ ವಿಶ್ರಮಿಸಿ. ಮಗುವಿನ ಪಾಲನೆ-ಪೋಷಣೆಗಳ ಜೊತೆ, ನಿಮ್ಮ ಆರೋಗ್ಯದ ಕಡೆಯು ಸ್ವಲ್ಪ ಗಮನ ವಹಿಸಿ.
ಯಾವ ಕೆಲಸಗಳಿಗೆ ಹೆಚ್ಚು/ಕಡಿಮೆ ಪ್ರಾಮುಖ್ಯತೆ ನೀಡಬೇಕು, ಪ್ರತಿನಿತ್ಯದ ಒತ್ತಡಗಳಿಂದ ಹೇಗೆ ದೂರ ಉಳಿಯಬೇಕು ಎಂಬುದರ ಮಾಹಿತಿಯನ್ನು, ನಾವು ನಿಮಗೆ ನೀಡುತ್ತೇವೆ.

೧. ಸರಿಪಡಿಸಲಾಗದ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥಮಾಡಬೇಡಿ
ಎಲ್ಲಾ ವಿಷಯದಲ್ಲಿ ಪರಿಪೂರ್ಣತೆಯನ್ನು ಅಪೇಕ್ಷಿಸಬೇಡಿ. ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಡಿ. ಉದಾ. ನಿಮ್ಮ ಮಗು ಇತರೆ ಮಕ್ಕಳಂತೆ ಸರಿಯಾದ ಸಮಯಕ್ಕೆ ಮಲಗದಿರುವುದು, ಊಟ ಮಾಡದಿರುವುದು ಇತ್ಯಾದಿ. ಇಂತಹ ವಿಷಯಗಳಿಗೆ ಆದ್ಯತೆಯನ್ನು ನೀಡದಿರಿ. ಮತ್ತೊಂದು ಉದಾ. ಮನೆಯ ಶುಚಿತ್ವದ ಕಡೆ ಹೆಚ್ಚು ಗಮನವಹಿಸಬೇಡಿ. ಸದಾಕಾಲ, ನಿಮ್ಮ ಮನೆಯು ಅಚ್ಚುಕಟ್ಟಾಗಿ ಇರಬೇಕು ಎಂದು ನೀವು ದಿನವಿಡಿ ಮನೆಯ ಕೆಲಸಗಳನ್ನು ಮಾಡುವುದರಿಂದ, ನಿಮ್ಮ ಒತ್ತಡ ಮತ್ತಷ್ಟು ಜಾಸ್ತಿಯಾಗುತ್ತದೆ. ನಿಮ್ಮ ಬಿಡುವಿನ ವೇಳೆಯಲ್ಲಿ ಕೆಲಸಗಳನ್ನು ಮಾಡಿ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

೨. ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ
ಇದನ್ನು ಸ್ಮಾರ್ಟ್ ವರ್ಕ್ ಎಂದು ಕರೆಯುತ್ತಾರೆ. ಸುಮ್ಮನೆ ಬೇಡದ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡದೆ, ನೀವು ಮಾಡಬೇಕಾದ ದಿನನಿತ್ಯದ ಕೆಲಸಗಳನ್ನು ಒಂದೆಡೆ ಬರೆದಿಡಿ, ನಂತರ ಅದನ್ನು ಪ್ರತಿನಿತ್ಯ ಪಾಲಿಸುವುದರಿಂದ, ಯಾವ ಕೆಲಸಕ್ಕೆ ಎಷ್ಟು ಸಮಯದ ಅಗತ್ಯವಿದೆ ಎಂದು ನಿಮಗೆ ಮೊದಲೇ ಅಂದಾಜ್ ಆಗುತ್ತದೆ. ಹೀಗೆ ಕೆಲಸಗಳ ಪಟ್ಟಿ ಮಾಡುವುದರಿಂದ ಕೆಲಸಗಳು ಮರೆತು ಹೋಗದೆ, ನೀವು ಪರದಾಡುವುದು ಕಡಿಮೆಯಾಗುತ್ತದೆ.

೩. ಸ್ವಲ್ಪ ಸಮಯ ಹೊರಗೆ ಹೋಗಿ ಕಾಲ ಕಳೆಯಿರಿ
ಹೌದು! ಪ್ರಕೃತಿ ಮಾತೆಗೆ ಎಲ್ಲವನ್ನು ಮರೆಸುವ ಶಕ್ತಿಯಿದೆ. ಆದ್ದರಿಂದ ಪ್ರತಿನಿತ್ಯ ಸ್ವಲ್ಪ ಸಮಯ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಿ. ಸಂಜೆಯ ವೇಳೆ ವಾಯುವಿಹಾರಕ್ಕೆ ಹೋಗುವುದು ಅಥವಾ ವಾರದ ಕೊನೆಯಲ್ಲಿ ಎಲ್ಲರೂ ಸೇರಿ ಸಣ್ಣ ಪಿಕ್ನಿಕ್ ಗೆ ಹೋಗುವುದನ್ನು ರೂಢಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ನವ ಚೈತನ್ಯದ ಅನುಭವವಾಗಿ, ಮುಂದೆ ಮಾಡಬೇಕಾದ ಕೆಲಸಗಳಿಗೆ ಹುಮ್ಮಸು ದೊರೆತಂತಾಗುತ್ತದೆ. ತಾಯಂದಿರೇ, ಈ ಹವ್ಯಾಸವನ್ನು ರೂಢಿಸಿಕೊಂಡು ನಿಮ್ಮ ಹಾಗು ನಿಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳಿ.

೪. ರಾತ್ರಿಯ ವೇಳೆ ಸಮಸ್ಯೆಯ ಬಗ್ಗೆ ಯೋಚಿಸದಿರಿ
‘ಚಿತೆ ಗಿಂತ ಚಿಂತೆ ಅಪಾಯಕಾರಿ” ಎಂಬ ಗಾದೆ ಮಾತಿದೆ. ರಾತ್ರಿಯ ವೇಳೆ ಹಾಸಿಗೆಯ ಮೇಲೆ ನೆಮ್ಮದಿಯಿಂದ ಮಲಗುವುದರ ಬದಲು, ಹೆಚ್ಚಿನ ಸಂಖ್ಯೆಯ ಮಹಿಳೆಯರು ಚಿಂತಿಸುತ್ತಾ ಹಾಗೆ ಸಮಯ ಕಳೆಯುತ್ತಾರೆ. ಆದರೆ ಗಂಡಸರು ಈ ರೀತಿಯ ವ್ಯರ್ಥ ಚಿಂತೆನೆಯಿಂದ ದೂರ ಉಳಿಯುತ್ತಾರೆ. ತಾಯಂದಿರೇ ನೀವು ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಗಳೇನು, ದಿಢೀರ್ ಮಾಯಾವಾಗುದಿಲ್ಲ ಅಲ್ಲವೇ? ಇದರಿಂದ ನಿಮ್ಮ ಆರೋಗ್ಯ ಹಾಗೂ ನಿಮ್ಮ ಮಗುವಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತದೆ. ಒತ್ತಡವಿಲ್ಲದ ಸಮಯ, ಅಂದರೆ ವಾರದ ಕೊನೆಯೋ ಅಥವಾ ಸಂಜೆಯ ವೇಳೆ ನಿಮ್ಮ ಸಂಗತಿಯೊಂದಿಗೆ ಕುಳಿತು ಸಮಾಧಾನದಿಂದ ಚರ್ಚಿಸಿ. ಹೀಗೆ ಮಾಡುವುದರಿಂದ ಜಗಳ, ಮನಸ್ತಾಪಗಳಿಂದ ದೂರ ಉಳಿದು, ಮನೆಯಲ್ಲಿ ಎಲ್ಲರು ಸಂತೋಷದಿಂದಿರಬಹುದು.

Comments are closed.