ಕರಾವಳಿ

ಡಾ. ಶಿವರಾಮ ಕಾರಂತರ ಪುತ್ರನ ಕಾರಿಗೆ ಬೆಂಕಿ : ಕಾರಿನಲ್ಲಿದ್ದ ಚಾಲಕ ಅಪಾಯದಿಂದ ಪಾರು

Pinterest LinkedIn Tumblr

ಮಂಗಳೂರು, ಡಿಸೆಂಬರ್.22: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಕಾರು ಭಾಗಶಃ ಸುಟ್ಟು ಹೋದ ಘಟನೆ ಗುರುವಾರ ನಗರದ ಬೆಸೆಂಟ್ ಸರ್ಕಲ್ ಬಳಿ ನಡೆದಿದೆ.

ಖ್ಯಾತ ಸಾಹಿತಿ ದಿವಂಗತ ಡಾ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತ ಅವರ ಮಾಲಕತ್ವದ ಕಾರು ಇದಾಗಿದ್ದು, ಕಾರಂತರ ಮನೆತನಕ್ಕೆ ಸೇರಿದ ರಘುರಾಮ್ ಎಂಬವರು ಈ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ಉಲ್ಲಾಸ್ ಕಾರಂತ ಅವರು ಬೆಂಗಳೂರಿನಲ್ಲಿದ್ದು, ಮಂಗಳೂರಿಗೆ ಬಂದಾಗಲೆಲ್ಲಾ ಓಡಾಟಕ್ಕೆ ಈ ಕಾರನ್ನು ಉಪಯೋಗಿಸುತ್ತಿದ್ದರು. ಇವರ ಮಾಲಕತ್ವದ ಸ್ಯಾಂಟ್ರೊ ಕಾರನ್ನು ಚಾಲಕ ರಘು ರಾಮ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮಂಗಳೂರಿನ ಬೆಸೆಂಟ್ ಕಾಲೇಜು ಸಮೀಪ ಪಿ.ವಿ.ಎಸ್.ಕಲಾಕುಂಜ ರಸ್ತೆಯಲ್ಲಿ ರಘುರಾಮ್ ಅವರ ಮನೆ ಇದೆ. ಗುರುವಾರ ಮಧ್ಯಾಹ್ನ ರಘುರಾಮ್ ಅವರು ಮನೆಯಿಂದ ಕಾರನ್ನು ಚಲಾಯಿಸಿಕೊಂಡು 200 ಮೀ. ದೂರ ತಲಪುವಷ್ಟರಲ್ಲಿ ಮುಂಭಾಗದ ಬೋನೆಟ್ನಲ್ಲಿ ಹೊಗೆಯಾಡುತ್ತಿರುವುದು ಕಂಡು ಬಂತು. ಕೂಡಲೇ ಕಾರು ನಿಲ್ಲಿಸಿ ಅವರು ಕೆಳಗೆ ಇಳಿದಿದ್ದು, ಬಳಿಕ ಸಮೀಪದಲ್ಲಿದ್ದ ಆಟೋ ರಿಕ್ಷಾ ಚಾಲಕರ ಸಹಾಯದಿಂದ ನೀರು ಚಿಮುಕಿಲಾಯಿತು. ಬೆಂಕಿ ಶಮನವಾಗದೆ ಇದ್ದಾಗ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕೀಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.