ಕುಂದಾಪುರ: ಲಿವರ್ ಸಂಬಂಧಿ ಸಮಸ್ಯೆಯಿಂದ ತೀರಾ ಅನಾರೋಗ್ಯ ಹೊಂದಿ ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಲು ಅನಿವಾರ್ಯತೆ ಹೊಂದಿದ್ದ 11 ವರ್ಷದ ಬಾಲಕಿಯನ್ನು ಬೈಂದೂರಿನಿಂದ ಮಂಗಳೂರು ತನಕ ಬಹುತೇಕ ಝಿರೋ ಟ್ರಾಫಿಕ್ ಜೊತೆಗೆ ಪೊಲೀಸ್ ಎಸ್ಕಾರ್ಟ್ ಮೂಲಕ ವಿಮಾನ ನಿಲ್ದಾಣಕ್ಕೆ ಗುರುವಾರ ಮಧ್ಯಾಹ್ನ ಬಿಡಲಾಯಿತು.
11 ವರ್ಷ ಪ್ರಾಯದ ಅರೆಶಿರೂರು ಮೂಲದ ಬಾಲಕಿ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯಾಗಿದ್ದು ಈಕೆ ಮೂರೂರು ಕಪ್ಪಾಡಿ ಶಾಲೆ ಮುಖ್ಯಶಿಕ್ಷಕ ಸಂಜೀವ್ ಗೌಡ ಎನ್ನುವವರ ಪುತ್ರಿ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ಆರೋಗ್ಯ ಸ್ಥಿತಿ ತೀವೃ ಗಂಭೀರಗೊಂಡ ಕಾರಣ ಆಕೆಗೆ ಸೂಕ್ತ ಚಿಕಿತ್ಸೆಯ ಅಗತ್ಯವಿತ್ತು, ಅದಕ್ಕಾಗಿಯೇ ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಬಾಲಕಿಯ ಪೋಷಕರ ನೆರವಿಗೆ ಬಂದ ಕಾರ್ಮಿಕರ ವೇದಿಕೆಯು ಬಾಲಕಿಯನ್ನು ಸೂಕ್ತ ಚಿಕಿತ್ಸೆಗೆ ಕೂಡಲೇ ಬೆಂಗಳೂರಿಗೆ ತಲುಪಿಸಲು ಜಿಲ್ಲಾಡಳಿತ ಮೊರೆ ಹೋಗಿದೆ.
ಜಿಲ್ಲಾಡಳಿತ ಸೂಕ್ತ ಸ್ಪಂದನೆ…
ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮನವಿಗೆ ಪೂರಕವಾಗಿ ಸ್ಪಂದಿಸಿದ ಉಡುಪಿ ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಬೈಂದೂರು-ಅರೆಶಿರೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂಬುಲೆನ್ಸ್ ವಾಹನ ಸಾಗಲು ಬಹುತೇಕ ಝಿರೋ ಟ್ರಾಫಿಕ್ ವ್ಯವಸ್ಥೆ ಜೊತೆಗೆ ಎರಡು ಪೊಲೀಸ್ ಬೆಂಗಾವಲು ವಾಹನ (ಎಸ್ಕಾರ್ಟ್) ನಿಯೋಜಿಸಿ ಮಾನವೀಯತೆ ಮೆರೆದರು. ಗುರುವಾರ ಮಧ್ಯಾಹ್ನ 1.30ರ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದ ಮೂಲಕ ಬಾಲಕಿಯನ್ನು ಚಿಕಿತ್ಸೆಗಾಗಿ ಕಳಿಸಲಾಗಿತ್ತು. ಎಸ್ಪಿ ಹಾಗೂ ಡಿಸಿ ಅವರ ಸ್ಪಂದನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾನವಿಯತೆ ಮೆರೆದ ರವಿ!
ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಬಾಲಕಿಯ ಆನರೋಗ್ಯ ತಿಳಿಯುತ್ತಲೇ ಬೆಂಗಳೂರಿನ ಹೆಬ್ಬಾಳದಲ್ಲಿರುವ ಖಾಸಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಸಂಪರ್ಕಿಸಿ ಬಾಲಕಿ ಪರಿಸ್ಥಿತಿ ಬಗ್ಗೆ ತಿಳಿಪಡಿಸುವುದಲ್ಲದೇ ಸ್ವತಃ ತಮ್ಮ ಚಿನ್ನಾಭರಣ ಗಿರವಿಯಿಟ್ಟು ೨ ಲಕ್ಷ ಹೊಂದಿಸಿ ಸದ್ಯದ ಖರ್ಚು ವೆಚ್ಚಕ್ಕೆ ನೀಡಿದ್ದಲ್ಲದೇ ಬೈಂದೂರಿನಿಂದ ಮಂಗಳೂರು ವಿಮಾನ ನಿಲ್ದಾಣದವರೆಗೂ ಬಾಲಕಿ ಹಾಗೂ ಕುಟುಂಬಿಕರ ಜೊತೆ ಸಾಗಿ ಅವರಿಗೆ ಧೈರ್ಯ ತುಂಬುವ ಕಾರ್ಯ ಮಾಡುತ್ತಾರೆ.
ದಾನಿಗಳ ನೆರವಿಗೆ ಮನವಿ: ಬಾಲಕಿಗೆ ಲಿವರ್ ಸಂಬಂಧಿ ಚಿಕಿತ್ಸೆಗೆ 40 ಲಕ್ಷಕ್ಕೂ ಅಧಿಕ ಹಣದ ಅಗತ್ಯವಿದೆ. ಬಾಲಕಿ ಪೋಷಕರು ಇದನ್ನು ಬರಿಸಲು ಅಶಕ್ತರಾಗಿದ್ದಾರೆ. ಬಾಲಕಿಯ ಚಿಕಿತ್ಸೆಗೆ ನೆರವನ್ನು ದಾನಿಗಳಿಂದ ನಿರೀಕ್ಷಿಸಲಾಗಿದೆ. ಈಗಾಗಲೇ ಇನ್ನೋರ್ವ ಮಗನನ್ನು ಲಿವರ್ ಸಂಬಂಧಿ ಸಮಸ್ಯೆಯಿಂದ ಕಳೆದ ವರ್ಷ ಸಂಜೀವ್ ಕಳೆದುಕೊಂಡಿದ್ದಾರೆ. ಪುತ್ರಿಯ ವೈದ್ಯಕೀಯ ಆರ್ಥಿಕ ವೆಚ್ಚವನ್ನು ಭರಿಸಲಾಗದೇ ಸಂಜೀವ್ ಗೌಡ ಕುಟುಂಬ ಪರಿತಪಿಸುತ್ತಿದೆ.
Comments are closed.