
ಮಂಗಳೂರು, ಡಿಸೆಂಬರ್. 14: ಭೃಷ್ಟಚಾರ ನಿಗ್ರಹ ದಳ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರು, ಮಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಧಾರವಾಡ, ಬೆಳಗಾಂ, ಬಳ್ಳಾರಿ ಸೇರಿ ರಾಜ್ಯದ ವಿವಿಧ ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು 11 ಮಂದಿ ನೀರಾವರಿ, ಕೃಷಿ, ಅರಣ್ಯ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಬಂಟ್ವಾಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್ ನಿರಾಂಡ ಅವರ ಕಚೇರಿ, ಬಂಟ್ವಾಳದ ನಿವಾಸ, ಸಹೋದರನ ತೋಕುರಿನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಹಚ್ಚಲಾಗಿದೆ. ಬಂಟ್ವಾಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್.ನಿರಾಂಡ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳದ ನಿವಾಸ, ಕಚೇರಿ ಮತ್ತು ನಿರಾಂಡ ಸೋದರನಿಗೆ ಸೇರಿದ ತೋಕೂರಿನಲ್ಲಿರುವ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿರಾಂಡ ಅಕ್ರಮ ಸಂಪತ್ತು ಮಾಡಿಕೊಂಡಿದ್ದು, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಸಾರ್ವಜನಿಕರ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪರಿಶೀಲನೆ ನಡೆಸಲಾಗಿದೆ.ಬುಧವಾರ ಮುಂಜಾನೆಯ ೬ ಗಂಟೆಯ ಸುಮಾರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯವರನ್ನು ಹೊರಕ್ಕೆ ಹೋಗಲು ಬಿಡದೆ ತಪಾಸಣೆ ನಡೆಸಿದ್ದು ಇದೇ ವೇಳೆ ಮಂಗಳೂರು ಹೊರವಲಯದ ತೋಕೂರಿನಲ್ಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಫ್ಯಾಕ್ಟರಿ ಅಂಡ್ ಬಾಯ್ಲರ್‌ನ ಜಂಟಿ ನಿರ್ದೇಶಕ ವಾಸಣ್ಣ, ಯೋಜನಾ ವಿಭಾಗದ ಜಂಟಿ ನಿರ್ದೇಶಕ ಎಂ.ಸಿ ಶಶಿಕುಮಾರ್, ಬಿಬಿಎಂಪಿಯ ಬಸವನಗುಡಿ ಸಹಾಯಕ ಇಂಜಿನಯರ್ ತ್ಯಾಗರಾಜ್, ವಿಜಯನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶೇಕ್ಷಾವಲಿ ಸೇರಿದಂತೆ 11 ಮಂದಿ ಅಧಿಕಾರಿಗಳ ಕಚೇರಿ, ಮನೆಗಳು, ಸಂಬಂಧಿಕರ ಮನೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ.
ಬಲೆಗೆ ಬಿದ್ದಿರುವ ಅಧಿಕಾರಿಗಳು ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ-ಪಾಸ್ತಿಗಳಿಸಿರುವುದು ದಾಳಿಯ ವೇಳೆ ಕಂಡು ಬಂದಿದೆ. ಭ್ರಷ್ಟ ಅಧಿಕಾರಿಗಳಿಂದ ವಶಪಡಿಸಿಕೊಂಡಿರುವ ಅಕ್ರಮ ಆಸ್ತಿ-ಪಾಸ್ತಿಯ ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಕೆ.ವಿ ಶರತ್‌ಚಂದ್ರ ಅವರು ತಿಳಿಸಿದ್ದಾರೆ.
ವಾಸಣ್ಣ ಅವರ ಕಾರ್ಮಿಕ ಭವನದಲ್ಲಿರುವ ಕಚೇರಿ, ಮನೆ, ಶಶಿಕುಮಾರ್ ಅವರ ಎಂಎಸ್ ಬಿಲ್ಡಿಂಗ್‌ನಲ್ಲಿರುವ ಕಚೇರಿ, ಮನೆ ಹಾಗೂ ತ್ಯಾಗರಾಜ್ ಅವರ ಬಸವನಗುಡಿ ಬಿಬಿಎಂಪಿ ಉಪವಿಭಾಗದ ಕಚೇರಿ, ಮನೆಯ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ.
ಶಿವಮೊಗ್ಗದಲ್ಲಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮಲ್ಲಪ್ಪ ಅವರ ಕಚೇರಿ, ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ-ಪಾಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಲಪ್ಪ ಅವರ ಶಿವಮೊಗ್ಗದ ಸಾಗರ ರಸ್ತೆಯ ಶರಾವತಿ ನಗರದ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಹಿಂದೆ ಗುಲ್ಬರ್ಗದಲ್ಲಿ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿದ್ದ ಮಲ್ಲಪ್ಪ ಅವರ ಅಕ್ರಮ ಆಸ್ತಿ ಗಳಿಕೆಯ ಬಗ್ಗೆ ದೂರುಗಳು ಬಂದಿದ್ದವು.
ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ವಾಡ) ಆಯುಕ್ತ ಶೇಕ್ಷಾವಲಿ ಅವರ ಬಳ್ಳಾರಿಯ ಕುವೆಂಪು ನಗರದ ಮನೆ, ಈದ್ಗಾ ಮೈದಾನದ ಬಳಿ ಇರುವ ಮನೆ ಸೇರಿ ಮೂರು ಮನೆಗಳು, ತೋರಣಗಲ್‌ನಲ್ಲಿರುವ ವಾಡ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.
ಶೇಕ್ಷಾವಲಿ ಅವರು ಹಿಂದೆ ಬಳ್ಳಾರಿಯ ನಗರಾಭಿವೃದ್ಧಿ ಆಯುಕ್ತರಾಗಿಯು ಕಾರ್ಯನಿರ್ವಹಿಸಿದ್ದ ವೇಳೆ ಲೋಕಾಯುಕ್ತ ದಾಳಿಗೊಳಗಾಗಿ ಸೇವೆಯಿಂದ ಅಮಾನತುಗೊಂಡು ನಂತರ ವಾಡ ಆಯುಕ್ತರಾಗಿ ನೇಮಕಗೊಂಡಿದ್ದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಎಸಿಎಫ್ ಪಾಂಡುರಂಗ ಪೈ ಅವರ ಹುಬ್ಬಳ್ಳಿಯಲ್ಲಿನ ಗಂಗಾಧರ ಲೇಔಟ್‌ನ ಮನೆ, ಧಾರವಾಡದ ಸಿಲ್ವರ್ ಆರ್ಕೆಟ್ ಬಡಾವಣೆಯ ಮನೆ ಸೇರಿ 2 ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆಹಚ್ಚಲಾಗಿದೆ.
ಬೆಳಗಾವಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್‌ಭೀಮಾ ನಾಯಕರ ಅವರ ಬೆಳಗಾವಿ, ಖಾನಪುರ, ಕಿತ್ತೂರು ಸೇರಿದಂತೆ 4 ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಯ ದಾಖಲೆಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾ ನಿರ್ದೇಶಕ (ಐಜಿಪಿ) ಶರತ್‌ಶ್ಚಂದ್ರ ಅವರು ತಿಳಿಸಿದ್ದಾರೆ.
ಕೊರಟಗೆರೆಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ್ ಅವರ ತುಮಕೂರಿನ ಸರಸ್ವತಿ ನಗರದಲ್ಲಿನ ಮನೆ, ಕೊರಟಗೆರೆಯ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಚಿಕ್ಕಬಳ್ಳಾಪುರದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಂತ್ ಅವರ ವಿದ್ಯಾರಣ್ಯಪುರದ ಮನೆ, ಶಿಡ್ಲಘಟ್ಟದ ತಂದೆಯ ಮನೆ, ನೆಲಮಂಗಲದ ಸಂಬಂಧಿಕರ ಮನೆ, ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಹಚ್ಚಲಾಗಿದೆ.
Comments are closed.