ಕರಾವಳಿ

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದನ ಕಳವು ಮಾಡುತ್ತಿದ್ದ ಇಬ್ಬರ ಬಂಧನ :5 ಲಕ್ಷ ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಡಿಸೆಂಬರ್. 13: ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ನಗದು ಸೇರಿದಂತೆ ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳವು ಮಾಡುತ್ತಿದ್ದ ಆರೋಪದ ಮೇಲೆ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಶಾಲೆಯ ಬಳಿಯ ನಿವಾಸಿ ಕೆ.ಮೊಹಮ್ಮದ್ ಎಂಬವರ ಪುತ್ರ ಸಾಹುಲ್ ಹಮೀದ್ (28) ಹಾಗೂ ಕಸಬ ಬೆಂಗ್ರೆ ಜುಮ್ಮ ಮಸಿದಿ ಬಳಿಯ ನಿವಾಸಿ ಹಸನಬ್ಬ ಎಂಬವರ ಪುತ್ರ ಅಹ್ಮದ್ ಕಬೀರ್ (29) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸರು ಕೂಳೂರು ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದ್ದಾರೆ. ಈ ಸಂದರ್ಭ ಅವರ ಕಾರು ಹಾಗೂ 6,300 ರೂ. ನಗದು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 5,06,300 ರೂ. ಎಂದು ಪೊಲೀಸರು ತಿಳಿಸಿದ್ದಾರೆ.

ಆ.8ರಂದು ಮುನ್ನೂರು ಗ್ರಾಮದ ಕುತ್ತಾರ್ಪದವು ಬಾಲಸಂರಕ್ಷಣಾ ಕೇಂದ್ರದಲ್ಲಿ ಸಾಕುತ್ತಿದ್ದ ಸುಮಾರು 10 ಸಾವಿರ ರೂ. ಮೌಲ್ಯದ ದನ ಕಳವಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಆರೋಪಿಗಳು ಮತ್ತು ದನ ಸಾಗಾಟ ಮಾಡಿದ್ದ ಕಾರಿನ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕೂಳೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಅಹ್ಮದ್ ಕಬೀರ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಬಜಪೆ, ಕಾರ್ಕಳ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ದನ ಕಳ್ಳತನ ಪ್ರಕರಣಗಳು ದಾಖಲಾಗಿವೆ.ಇನ್ನೊರ್ವ ಆರೋಪಿ ಸಾಹುಲ್ ಹಮೀದ್ ಎಂಬಾತನ ವಿರುದ್ಧ ಕಡಬ,ಉಪ್ಪಿನಂಗಡಿ,ಪಣಂಬೂರು, ಬಜಪೆ, ಕಾರ್ಕಳ ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದನ ಕಳ್ಳತನಕ್ಕೆ ಸಂಬಂಧಪಟ್ಟಂತೆ 8 ಪ್ರಕರಣಗಳು ದಾಖಲಾಗಿವೆ.

ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

Comments are closed.