ಕರಾವಳಿ

ಫರಂಗಿಪೇಟೆಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ : ಸಾಮರಸ್ಯ ನಡಿಗೆಗೆ ಆರಂಭದಲ್ಲೇ ವಿಘ್ನ

Pinterest LinkedIn Tumblr

ಮಂಗಳೂರು, ಡಿಸೆಂಬರ್.12: ನಗರದ ಹೊರವಲಯದ ಫರಂಗಿಪೇಟೆಯಲ್ಲಿ ರಾಜಹಂಸ ಬಸ್ ಸೇರಿದಂತೆ ಕೆ‌ಎಸ್‌ಆರ್‌ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ದುಷ್ಕರ್ಮಿಗಳು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಇಂದು ಫರಂಗಿಪೇಟೆಯಿಂದ ಮಾಣಿಯವರೆಗೆ ‘ಸಾಮರಸ್ಯದ ನಡಿಗೆ’ ಹಮಿಕೊಳ್ಳಲಾಗಿದ್ದು, ಸಾಮರಸ್ಯದ ನಡಿಗೆಗೆ ಪೂರ್ವದಲ್ಲೇ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಜಾಥಾಕ್ಕೆ ಆರಂಭದಲ್ಲೇ ವಿಘ್ನವನ್ನುಂಟು ಮಾಡಲು ಯತ್ನಿಸಿದ್ದಾರೆ.

ಜಾಥಾಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಫರಂಗಿಪೇಟೆಯಲ್ಲಿ ಚಾಲನೆಗೊಳ್ಳಲಿದೆ. ಕಲ್ಲಡ್ಕ ಮಾರ್ಗವಾಗಿ ಸಾಗಲಿರುವ ಜಾಥಾಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಸಿಪಿಎಂ ಮುಖಂಡರು ಸಾಥ್ ನೀಡಲಿದ್ದಾರೆ. ಜಾಥಾದ ಹಿನ್ನೆಲೆಯಲ್ಲಿ 300 ಕೆ.ಎಸ್.ಆರ್.ಪಿ. ಸೇರಿದಂತೆ 1000ಕ್ಕೂ ಅಧಿಕ ಪೊಲೀಸರ ಭದ್ರತೆ ಒದಗಿಸಲಾಗಿದೆ.

ಸಾಮರಸ್ಯಕ್ಕೆ ಧಕ್ಕೆ ಹಿನ್ನೆಲೆಯಲ್ಲಿ ಸಾಮರಸ್ಯ ನಡಿಗೆ : ರೈ

ಜಾತ್ಯತೀತ ನಿಲುವಿನ ಎಲ್ಲಾ ಪಕ್ಷ,ಸಂಘಟನೆಗಳು ಹಾಗೂ ಸಾರ್ವಜನಿಕರೊಂದಿಗೆ ಈ ಪಾದಯಾತ್ರೆ ನಡೆಯಲಿದೆ.ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ವಿದ್ಯಾವಂತರ,ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿ ಪಡೆದಿದ್ದರೂ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಯಾಗುವ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಮಾನ ಮನಸ್ಕರು ಸೇರಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿರುವುದಾಗಿ ರಮಾನಾಥ ರೈ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ವಾತವರಣ ಸೃಷ್ಟಿಯಾದಾಗ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಬಂದ ಸಲಹೆಯ ಪ್ರಕಾರ ಜಿಲ್ಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.ಆದರೂ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೆ ನಿಗದಿಯಾಗಿದ್ದ ಪಾದಯಾತ್ರೆಯನ್ನು ಮುಂದೂಡಲಾಗಿತ್ತು.

ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಹತ್ಯೆಗೀಡಾದವರ ಹತ್ಯೆಯಲ್ಲಿ ಭಾಗಿಯಾದವರನ್ನು ಮತ್ತು ಭಾಗಿಯಾದ ಸಂಘಟನೆಯನ್ನು ಹೊರತು ಪಡಿಸಿ ಎಲ್ಲರೂ ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸಾಮರಸ್ಯ ನಡಿಗೆಗೆ ಪಕ್ಷದೊಳಗೇ ಅಪಸ್ವರ :

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಇಂದು ಹಮ್ಮಿಕೊಂಡಿರುವ ‘ಸಾಮರಸ್ಯದ ನಡಿಗೆ’ ಬಗ್ಗೆ ಪಕ್ಷದೊಳಗೇ ಅಪಸ್ವರ ಎದ್ದಿದೆ. ಹಿರಿಯ ಸಚಿವರಾಗಿ , ಜಿಲ್ಲೆಯ ಉಸ್ತುವಾರಿ ಇದ್ದೂ ಜಿಲ್ಲೆಯಲ್ಲಿ ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎಂಬ ವ್ಯಾಪಕ ಅಸಮಾಧಾನ ಜನರಲ್ಲಿದೆ.

ಜೊತೆಗೆ ಪಕ್ಷದ ಜನಪ್ರಿಯ ಯುವ ನಾಯಕ, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಎ.ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆಗೆ ಸಚಿವರು ನ್ಯಾಯ ಒದಗಿಸಿಲ್ಲ ಎಂಬ ಆಕ್ರೋಶ ಬಂಟ್ವಾಳದ ಜನರಲ್ಲಿದೆ. ಅದನ್ನು ಕಡೆಗಣಿಸಿ ಸಾಮರಸ್ಯ ಪಾದಯಾತ್ರೆ ಮಾಡಿದರೆ ಅದಕ್ಕೆ ಸೂಕ್ತ ಸ್ಪಂದನೆ ಸಿಗುವುದು ಸಂಶಯ ಎಂದು ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಅಭಿಪ್ರಾಯಿಸುತ್ತಿದ್ದಾರೆ.

Comments are closed.