ಕರಾವಳಿ

ಮಾರ್ಚ್ ಅಂತ್ಯದೊಳಗೆ ಕುಂದಾಪುರ-ಸುರತ್ಕಲ್ ಚತುಷ್ಪತ ಕಾಮಗಾರಿ ಪೂರ್ಣ

Pinterest LinkedIn Tumblr

ಉಡುಪಿ: ಮಾರ್ಚ್ 2018 ರ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯಲ್ಲಿ ಸುರತ್ಕಲ್‌ನಿಂದ ಕುಂದಾಪುರದವರೆಗೆ ಹಾದು ಹೋಗಿರುವ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು.

ಶುಕ್ರವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸುರತ್ಕಲ್‌ನಿಂದ ಕುಂದಾಪುರದವರೆಗೆ ಹಾದು ಹೋಗಿರುವ 90 ಕಿ.ಮೀ ಚತುಷ್ಪತ ಹೆದ್ದಾರಿಯಲ್ಲಿ ಈಗಾಗಲೇ 82 ಕಿಮೀ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಉಳಿದ 8 ಕಿಮೀ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು, ಹೆದ್ದಾರಿಯ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ, ಕೆಲವು ಕಡೆಗಳಲ್ಲಿ ಸಾರ್ವಜನಿಕರಿಂದ ಬಂದ ಕೋರಿಕೆಗಳನ್ನು ಪರಿಗಣಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಕಾಮಗಾರಿ ನಡೆಯುತ್ತಿರುವ ಎಲ್ಲಾ ಫ್ಲೈ ಓವರ್ ಗಳನ್ನು ಸಹ ಇದೇ ಅವಧಿಯಲ್ಲಿ ಮುಕ್ತಾಯಗೊಳಿಸಲಗುವುದು ಎಂದು ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಸ್ಯಾಮ್ಸನ್ ತಿಳಿಸಿದರು.

ರಸ್ತೆ ಕಾಮಗಾರಿ ನಡೆಸುವ ಕೆಲವು ಕಡೆ ಸ್ಥಳದಲ್ಲಿ ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ ಹೆದ್ದಾರಿ ಅಧಿಕಾರಿಗಳ ಕೋರಿಕೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ , ಯಾವ ನಿರ್ದಿಷ್ಟ ದಿನಾಂಕ ಮತ್ತು ಸ್ಥಳದದಲ್ಲಿ ರಕ್ಷಣೆ ಅಗತ್ಯವಿದೆ ಎಂದು ಬಗ್ಗೆ ಪತ್ರ ಬರೆದಲ್ಲಿ, ಪೊಲೀಸ್ ರಕ್ಷಣೆ ನೀಡಲಾಗುವುದು ಹಾಗೂ ಹೆದ್ದಾರಿಯ ಡಿವೈಡರ್ ಗಳ ಮೇಲೆ ಬೆಳೆದಿರುವ ಗಿಡಗಳನ್ನು ಸೂಕ್ತ ರೀತಿಯಲ್ಲಿ ಕತ್ತರಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರ ರಸ್ತೆ ಕಾಮಗಾರಿಯಲ್ಲಿ, ತೀರ್ಥಹಳ್ಳಿ – ಕಮರಳ್ಳಿ ರಸ್ತೆ ಕಾಮಗಾರಿಗೆ 110 ಕೋಟಿ ಮೊತ್ತದ ಡಿಪಿ‌ಆರ್ ಅಗಿದ್ದು, ಮಲ್ಪೆ- ಪರ್ಕಳ ರಸ್ತೆ ಕಾಮಗಾರಿಗೆ 110 ಕೋಟಿ ಮೊತ್ತದ ಡಿಪಿ‌ಆರ್ ಅಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪಾಧಿಕಾರದ ಇಂಜಿನಿಯರ್ ಮಾಹಿತಿ ನೀಡಿದರು, ಕೇಂದ್ರ ರಸ್ತೆ ಕಾಮಗಾರಿ ನಿರ್ಮಿಸುವ ಸ್ಥಳದಲ್ಲಿ ಕಾಮಗಾರಿ ಕುರಿತು ಸೂಕ್ತ ವಿವರಣಾ ಫಲಕ ಅಳವಡಿಸುವಂತೆ ಸಂಸದರು ಸೂಚಿಸಿದರು.

(ಸಾಂದರ್ಭಿಕ ಚಿತ್ರ)

Comments are closed.