ಕರಾವಳಿ

ಪಾರ್ಟಿ ಫಂಡ್ ಎಂಬುದೇ ಎಲ್ಲಾ ಅವ್ಯವಸ್ಥೆಗಳಿಗೆ ಮೂಲ : ಕೆಪಿಜೆಪಿ ಸಂಸ್ಥಾಪಕ, ನಟ ಉಪೇಂದ್ರ

Pinterest LinkedIn Tumblr

ಮಂಗಳೂರು, ಡಿಸೆಂಬರ್ 5: ರಾಜಕೀಯದ ಲೋಪದೋಷಗಳು, ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ಅನುಮಾನ ಪಡುವ ಬದಲು ಅಲ್ಲಿನ ಸಮಗ್ರ ಬದಲಾವಣೆಗಾಗಿ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸಂಸ್ಥಾಪಕ- ನಟ ಉಪೇಂದ್ರ ಹೇಳಿದ್ದಾರೆ.

ತಮ್ಮ ನೂತನ ಪಕ್ಷ ಕೆಪಿಜೆಪಿಯ ಪ್ರಚಾರದ ಸಲುವಾಗಿ ಮಂಗಳವಾರ ಮಂಗಳೂರಿಗೆ ಭೇಟಿ ನೀಡಿದ ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈಗಿರುವ ರಾಜಕೀಯ ವ್ಯವಸ್ಥೆಯ ವ್ಯತಿರಿಕ್ತವಾಗಿ ಕೆಪಿಜೆಪಿಯನ್ನು ಆರಂಭಿಸಿದ್ದೇವೆ. ಇಲ್ಲಿಯ ಜನರೂ ಮಾಧ್ಯಮಗಳ ಮೂಲಕ ನನ್ನ ಅಭಿವೃದ್ಧಿಯ ಚಿಂತನೆಗಳನ್ನು ಬೆಂಬಲಿಸುವ ವಿಶ್ವಾಸ ಇದೆ. ಬೆಂಬಲಿಗರು, ಕಾರ್ಯಕರ್ತರ ದಂಡಿಲ್ಲದೆ, ನಾನೇ ಸ್ವತಹ ಪ್ರಜಾಕೀಯದ ಚಿಂತನೆಗಳನ್ನು ಪಸರಿಸುತ್ತಿದ್ದೇನೆ ಎಂದು ಅವರು ಪ್ರಜಾಕೀಯದ ಬಗ್ಗೆ ಮಾಹಿತಿ ನೀಡಿದರು.

ನನಗೆ 224 ಮಂದಿ ಸಿಎಂಗಳಂತೆ ಅಂದರೆ ಕೆಲಸ ಮಾಡುವ ಅಭ್ಯರ್ಥಿಗಳು ಮತ್ತು ಮತದಾರರು ಬೇಕು “ರಾಜ್ಯದಲ್ಲಿ ಜನರ ಮಧ್ಯೆ ಕೆಲಸ ಮಾಡುವ 224 ಜನ ಸಿಎಂ ನನಗೆ ಬೇಕಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಂತೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು”. ಪ್ರಜಾಕೀಯದಲ್ಲ 224 ಅಭ್ಯರ್ಥಿಗಳು ಕೂಡಾ ಮುಖ್ಯಮಂತ್ರಿಗಳಾಗಿದ್ದುಕೊಂಡು ಅವರವರ ಕ್ಷೇತ್ರದಲ್ಲಿ ಕಾರ್ಮಿಕರಂತೆ ಕೆಲಸ ಮಾಡುವವರಾಗಿರುತ್ತಾರೆ. ಅವರ ಆಯ್ಕೆ ಕೂಡಾ ಅವರ ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿಯ ದೃಷ್ಟಿಕೋನದ ಚಿತ್ರಣದ ಮೂಲಕ ಆಗಲಿದೆ ಎಂದು ಉಪೇಂದ್ರ ಹೇಳಿದರು.

ಒಬ್ಬ ಕಾರ್ಮಿಕನಾಗಿ ಜನರ ಮುಂದೆ ಹೋಗುತ್ತಿದ್ದೇನೆ. ನನ್ನ ಯೋಚನೆಗಳನ್ನು ಮುಂದಿಟ್ಟು ಅವರೊಂದಿಗೆ ಮಾತನಾಡುತ್ತಿದ್ದೇನೆ. ಸಮಾಜದಲ್ಲಿನ ಪ್ರಜ್ಞಾವಂತರು ಪಕ್ಷಕ್ಕೆ ಬನ್ನಿ ಎಂದು ಅವರು ಕರೆ ನೀಡಿದರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯದಂತೆ ಯಾರು ಕೂಡಾ ಜನರ ಪ್ರತಿನಿಧಿಗಳಾಗಬಹುದು. ಅದಕ್ಕೆ ವಿದ್ಯಾರ್ಹತೆ, ವಯಸ್ಸಿನ ಪರಿಮಿತಿ, ಜ್ಞಾನದ ಪರಿಮಿತಿಯನ್ನು ವಿಧಿಸಲಾಗಿಲ್ಲ. ಪ್ರಜೆಗಳ ಜವಾಬ್ದಾರಿಯೇ ಇಲ್ಲಿ ಪ್ರಮುಖ ಎಂದವರು ಹೇಳಿದರು.

ಎಲ್ಲಿ ಸತ್ಯ ಇರುತ್ತದೋ ಅಲ್ಲಿ ಧರ್ಮ ಇರುತ್ತದೆ. ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ನಮ್ಮಲ್ಲಿ ಇಲ್ಲದಂತಾಗಿದೆ. ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಉಚಿತವಾಗಿ ಸಿಕ್ಕಿದರೆ ಯಾರೂ ಭೃಷ್ಟಾಚಾರಿಗಳು ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇಡೀ ದೇಶದಲ್ಲಿ ಒಂದು ಚುನಾವಣೆ ಮಾಡುವ ಪರಿಕಲ್ಪನೆಯ ಮೊದಲು ರಾಜ್ಯದಲ್ಲಿ ಏಕ ಚುನಾವಣೆ ಸಫಲವಾಗಬೇಕಿದೆ. ಇಡೀ ದೇಶಕ್ಕೆ ಏಕ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಮೂಲೆ ಗುಂಪಾಗಲಿವೆ. ಅದರ ಬದಲು ರಾಜ್ಯದಲ್ಲಿ ಏಕ ಚುನಾವಣೆ ವ್ಯವಸ್ಥೆ ಜಾರಿಯಾಗುವ ಅಗತ್ಯವಿದೆ ಎಂದರು.

ಈ ದೇಶದಲ್ಲಿ ಶೇ 80ರಷ್ಟು ಒಳ್ಳೆಯವರಿದ್ದಾರೆ. ಆ 80ರಷ್ಟು ಜನರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಕೆಪಿಜೆಪಿಯ ಒಬ್ಬೊಬ್ಬ ಅಭ್ಯರ್ಥಿಯು ಮುಖ್ಯಮಂತ್ರಿಯಂತೆ ಕೆಲಸ ಮಾಡಬೇಕು. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುವ ಮೊದಲು ರಾಜ್ಯಗಳಲ್ಲಿ ವಿಧಾನ ಸಭೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಏಕ ಕಾಲಕ್ಕೆ ನಡೆಯಬೇಕು ಎಂದು ಅವರು ಹೇಳಿದರು.

ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದ ಕುರಿತು ಪ್ರತಿಕ್ರಿಯಿಸಿದ ನಟ ಉಪೇಂದ್ರ, ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಉತ್ತಮವಾದದ್ದೇ. ಅವರು ಒಳ್ಳೆಯದನ್ನು ಮಾಡಲು ಹೊರಟಿದ್ದಾರೆ. ಅಸಂಘಟಿತ ಕ್ಷೇತ್ರದಿಂದ ಸಂಘಟಿತ ಕ್ಷೇತ್ರಗಳನ್ನು ಮಾಡಲು ಹೊರಟಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್ಟಿ ಎಲ್ಲವೂ ಒಳ್ಳೆಯದೇ. ಆದರೆ, ಅದರ ಮಧ್ಯೆ ಅಂತರ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು. ನೋಟು ಅಮಾನ್ಯೀಕರಣದಿಂದ 1,000 ರೂ. ನೋಟು ಹೋಯಿತು. ಆದರೆ 2,000 ರೂ.ನೋಟು ಬಂತು. ಇದರಿಂದಾಗಿ ಎರಡು ಬೀರುಗಳಲ್ಲಿ ಹಣ ತುಂಬಿಸುತ್ತಿದ್ದವರಿಗೆ ಒಂದು ಬೀರುವಿಲ್ಲಿಡಲು ಅವಕಾಶ ಕಲ್ಪಿಸಿದಂತಾಯಿತು. ಫುಲ್ ಡಿಜಿಟಲ್ ಆಗಿದ್ದರೆ ಯಾರಿಗೂ ಕಳ್ಳತನ ಮಾಡಲು ಆಗುವುದಿಲ್ಲ ಎಂಬ ವಿಶ್ವಾಸ ಬರುತ್ತಿತ್ತು ಎಂದರು.

ಪಾರ್ಟಿ ಫಂಡ್ ಎಂಬುದೇ ಎಲ್ಲಾ ಅವ್ಯವಸ್ಥೆಗಳಿಗೆ ಮೂಲ. ಹಾಗಾಗಿ ಆ ಹಣದ ವ್ಯವಹಾರ ಪ್ರಜಾಕೀಯದಲ್ಲಿಲ್ಲ. ಮಾಧ್ಯಮಗಳ ಮೂಲಕ ನನ್ನ ಆಶಯಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇನೆ. ಈಗಷ್ಟೇ ಪ್ರಜಾಕೀಯದ ಕುರಿತು ಜನರಿಗೆ ತಿಳಿಸುವ ಕಾರ್ಯವನ್ನು ಆರಂಭಿಸಿ ಇದೀಗ ಕರಾವಳಿಗೆ ಬಂದಿದ್ದೇನೆ. ಹೆಸರು ಮಾಡಲು, ದುಡ್ಡು ಮಾಡಲು ಬಂದಿಲ್ಲ. ನನ್ನ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದೇನೆ. ಸತ್ತ ಮೇಲೆ ಇತಿಹಾಸ ಪುಸ್ತಕದಲ್ಲಿ ಹೆಸರು ಇರಬೇಕು ಎಂಬ ಮೂರ್ಖತನವೂ ಇಲ್ಲ ಎಂದು ಹೇಳುತ್ತಾ ಉಪೇಂದ್ರ ಪ್ರಜಾಕೀಯದ ಬಗ್ಗೆ ಮಾತನಾಡಿದರು.

Comments are closed.