ಕರಾವಳಿ

ನಮ್ಮೊಳಗಿರುವ ದೇವರನ್ನು ಹುಡುಕಿ : ಎಸ್.ಷಡಕ್ಷರಿ

Pinterest LinkedIn Tumblr

ಮೂಡುಬಿದಿರೆ:` ನಮ್ಮೊಳಗೆ ಬಂಗಾರದ ವ್ಯಕ್ತಿತ್ವವಿದೆ. ಆದರೆ ಮನುಷ್ಯ ತನ್ನ ಸಣ್ಣತನದಿಂದಾಗಿ ಮಣ್ಣಿನ ವಿಗ್ರಹವಾಗಿದ್ದಾನೆ. ನಮ್ಮ ಉನ್ನತ ನಡವಳಿಕೆಯಿಂದ ನಮ್ಮ ಒಳಗಿರುವ ಚಿನ್ನದ ವ್ಯಕ್ತಿತ್ವ ಗೋಚರಿಸುವಂತಾಗಬೇಕು’ ಎಂದು ಎಸ್.ಷಡಕ್ಷರಿ ಹೇಳಿದರು.

ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಧಾರ್ಮಿಕ ಬಹುತ್ವ-ಸಹಬಾಳ್ವೆಯ ನೆಲೆ’ ವಿಚಾರಗೋಷ್ಠಿಯಲ್ಲಿ ಆರಾಧನಾ ದೃಷ್ಟಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ದೇವರು ನಮ್ಮಲ್ಲೇ ಇದ್ದಾನೆ. ಈ ದೇವರನ್ನು ವಿವಿಧ ಬಗೆಯಲ್ಲಿ ತಲುಪುವ, ಆರಾಧಿಸುವ ಮಾರ್ಗವನ್ನು ನಮ್ಮ ಪರಂಪರೆ ಹೇಳಿಕೊಟ್ಟಿದೆ. ವಿವಿಧ ದಾಸರು, ದೈವಭಕ್ತರು ಹಾಡಿದ ಕೀರ್ತನೆಗಳು, ರಚಿಸಿದ ಶ್ಲೋಕಗಳು ಆರಾಧನೆಗಿರುವ ಮಹತ್ವವನ್ನು ತಿಳಿಸಿಕೊಡುತ್ತವೆ. ದೇವರು ಒಬ್ಬನೇ ಆದರೂ ಅವನಿಗೆ ನಾವು ಕೊಟ್ಟಿರುವ ಹೆಸರುಗಳು, ರೂಪಗಳು ಬೇರೆ. ನಮ್ಮ ಔನ್ನತ್ಯದಲ್ಲಿ ಅಡಗಿರುವ ಆ ದೈವತ್ವವನ್ನು ಹುಡುಕುವ, ತಲುಪುವ ಪ್ರಯತ್ನ ನಮ್ಮಿಂದಾಗಬೇಕು ಎಂದರು.

ದೇವರ ಶಕ್ತಿ, ಕಾರಣಿಕದ ಕುರಿತು ಇರುವ ಚರ್ಚೆಗಳ ಬಗ್ಗೆ ಮಾತನಾಡಿದ ಅವರು, ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ ದೇವರು ಮಾತ್ರ ಶಕ್ತಿವಂತ; ಬಾಕಿ ದೇವತೆಗಳು ದುರ್ಬಲರು ಎಂದು ಜನ ವ್ಯಾಖ್ಯಾನಿಸುತ್ತಾರೆ. ಆದರೆ ನಮ್ಮೊಳಗಿನ ನಂಬಿಕೆ, ಆರಾಧನೆಯ ಬಗೆ ಗಟ್ಟಿಯಾದಾಗ ಮಾತ್ರ ದೇವರು ಗಟ್ಟಿಯಾಗುತ್ತಾನೆ, ನಂಬಿಕೆ ಹುಸಿಯಾಗಿದ್ದರೆ ಎಂದಿಗೂ ದೇವರನ್ನು ತಲುಪಲು ಸಾಧ್ಯವಿಲ್ಲ ಎಂದು ಷಡಕ್ಷರಿ ಅಭಿಪ್ರಾಯಪಟ್ಟರು.

ತಮ್ಮ ವಿಚಾರಮಂಡನೆಯ ಸಂದರ್ಭದಲ್ಲಿ ಖ್ಯಾತ ದಾಸರ, ಭಕ್ತಿಪಂಥದ ಕರ್ತೃಗಳ ಶ್ಲೋಕಗಳು, ಕೀರ್ತನೆಗಳನ್ನು ಅವರು ಪ್ರಸ್ತುತಪಡಿಸಿದರು.

ಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿಯ ಸಮ್ಮೇಳನಾಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಡಾ. ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.

Comments are closed.