
ಮಂಗಳೂರು, ಡಿಸೆಂಬರ್.1: ಮೋಟಾರು ವಾಹನ ಕಾಯ್ದೆಯಂತೆ ವಾಹನಗಳ ನಂಬರ್ ಪ್ಲೇಟ್ ಗಳಲ್ಲಿ ನಾಮಫಲಕ ಹಾಕುವಂತಿಲ್ಲ. ಮಾತ್ರವಲ್ಲದೆ ಸರ್ವೋಚ್ಛ ನ್ಯಾಯಾಲಯ ಈಗಾಗಲೇ ಗಣ್ಯರ ವಾಹನಗಳ ಕೆಂಪು ದೀಪವನ್ನು ಕೂಡಾ ತೆಗೆಸಲು ಆದೇಶ ನೀಡಿದೆ. ಹಾಗಿರುವಾಗ ಯಾವುದೇ ರೀತಿಯ ನಾಮಫಲಕಗಳನ್ನು ಕೂಡಾ ವಾಹನಗಳಲ್ಲಿ ಹಾಕಿ ಓಡಿಸುವಂತಿಲ್ಲ ಎಂದು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. ಮಾತ್ರವಲ್ಲದೇ ಈ ಬಗ್ಗೆ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ಅವರು ಆರ್‌ಟಿಓ ಅಧಿಕಾರಿಗೆ ಸೂಚನೆ ನೀಡಿದರು.

ಮಂಗಳೂರಿನ ಆರ್‌ಟಿಓ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ನ ಅಧ್ಯಕ್ಷತೆ ವಹಿಸಿ ಅವರು ಅವರು ಮಾತನಾಡಿದರು.ದ.ಕ. ಜಿಲ್ಲೆಯಲ್ಲಿ ಕೆಲವೊಂದು ಬ್ಯಾಂಕ್ ಅಧಿಕಾರಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಖಾಸಗಿ ವಾಹನಗಳಲ್ಲಿ ‘ಭಾರತ ಸರಕಾರ’ವೆಂಬ ಅಥವಾ ಸಂಘಟನೆ, ಸಂಸ್ಥೆಗಳ ನಾಮಫಲಕಗಳನ್ನು ಹಾಕಲಾಗುತ್ತಿದ್ದು, ವಿಶೇಷ ಅಭಿಯಾನದ ಮೂಲಕ ಅದನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಶಿವಮೊಗ್ಗ ವಿಭಾಗದ ಜಂಟಿ ಆಯುಕ್ತ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ನಗರದಲ್ಲಿ ಬಹುತೇಕವಾಗಿ ದ್ವಿಚಕ್ರವಾಹನಗಳು ಇನ್ಶೂರೆನ್ಸ್ ಇಲ್ಲದೆ ಓಡಾಟ ನಡೆಸುತ್ತಿವೆ. ಈ ಬಗ್ಗೆ ಸೂಕ್ತ ತಪಾಸಣೆ ಹಾಗೂ ಕ್ರಮ ಅಗತ್ಯ ಎಂದು ಸಭೆಯಲ್ಲಿ ಜಿ.ಕೆ. ಟ್ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ಪಾಟೀಲ್, ವಾಹನಗಳಿಗೆ ಇನ್ಸೂರೆನ್ಸ್ ಕಡ್ಡಾಯ ಇಲ್ಲವಾದಲ್ಲಿ ಅಂತಹ ವಾಹನಗಳನ್ನು ವಶಕ್ಕೆ ಪಡೆಯುವ ಅಧಿಕಾರ ಆರ್ಟಿಒ ಅಧಿಕಾರಿಗಳಿಗೆ ಇದೆ ಎಂದರು.

ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳ ಸುಗಮ ಪ್ರಯಾಣದ ದೃಷ್ಟಿಯಿಂದ ಬಸ್ಸುಗಳ ಫುಟ್ಬೋರ್ಡ್ಗಳನ್ನು 52 ಸೆ.ಮೀ. ಎತ್ತರಕ್ಕೆ ಸೀಮಿತಗೊಳಿಸುವಂತೆ ಕೆಲ ತಿಂಗಳ ಹಿಂದಿನ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಪಾಲನೆಯಾಗಿಲ್ಲ ಎಂಬ ದೂರಿಗೆ, ಎಸಿಪಿ (ಸಂಚಾರಿ) ಮಂಜುನಾಥ್ ಪ್ರತಿಕ್ರಿಯಿಸಿ, ಪ್ರತಿನಿತ್ಯ ಈ ಬಗ್ಗೆ ಬಸ್ಸುಗಳ ತಪಾಸಣೆ ನಡೆಸಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಖಾಸಗಿ ಬಸ್ಸು ಮಾಲಕರು ಕೂಡಾ ಮಾತನಾಡಿ, ಈಗಾಗಲೇ ಬಸ್ಸುಗಳಲ್ಲಿ ಈ ನಿಯಮವನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೊಂದು ಗ್ರಾಮಾಂತರ ಪ್ರದೇಶದ ಬಸ್ಸುಗಳಲ್ಲಿ ಅಲ್ಲಿನ ರಸ್ತೆಯ ಹಿನ್ನೆಲೆಯಲ್ಲಿ ಈ ಹಿಂದೆ ಬಸ್ಸುಗಳ ಫುಟ್ಬೋರ್ಡ್ನಲ್ಲಿ ಕೆಲವೊಂದು ವ್ಯತ್ಯಾಸಗಳಿದ್ದವು. ಅವುಗಳನ್ನು ಕೂಡಾ ಸರಿಪಡಿಸಲಾಗುತ್ತಿದೆ ಎಂದು ಹೇಳಿದರು.

ಹಿರಿಯ ಪರಿಸರವಾದಿ, ಸಾಹಿತಿ ಬಿ.ಎಸ್. ಹಸನಬ್ಬ ಮನವಿ ಸಲ್ಲಿಸುತ್ತಾ, ಬಸ್ಸುಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರುವುದನ್ನು ಕಡ್ಡಾಯಗೊಳಿಸಬೇಕು. 15 ವರ್ಷ ಮೇಲ್ಪಟ್ಟ ಬಸ್ಸುಗಳ ಸಂಚಾರವನ್ನು ನಿಲ್ಲಿಸಬೇಕು. ಬಸ್ಸುಗಳ ಹಳೆಯ ಟಯರ್ಗಳನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೊಬ್ಬರು ಮಾತನಾಡಿ, ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ನಡೆಸುತ್ತಿರುವುದರಿಂದ ತೊಂದರೆಯಾಗುತ್ತಿವೆ. ಮಾತ್ರವಲ್ಲದೆ, ಒಬ್ಬ ವ್ಯಕ್ತಿ ಎರಡೆರಡು ರಿಕ್ಷಾ ಪರ್ಮಿಟ್ ಪಡೆದಿರುವ ಕುರಿತು ದೂರು ಸಲ್ಲಿಸಿದ್ದರೂ ಕ್ರಮ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಪಘಾತ ಸಂದರ್ಭಗಳಲ್ಲಿ ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸಲು ರಿಕ್ಷಾವೇ ಪ್ರಮುಖ ಸಂಚಾರ ಸಾಧನ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಗ್ರಾಮಾಂತರ ಪ್ರದೇಶದ ಆಟೋಗಳಿಗೆ ನಗರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಶಾಹುಲ್ ಹಮೀದ್ ಎಂಬವರು ಒತ್ತಾಯಿಸಿದರು.
ಈ ಬಗ್ಗೆ ಸಭೆಯಲ್ಲಿ ಕೆಲ ನಿಮಿಷ ಕಾಲ ಪರಸ್ಪರ ವಾಗ್ವಾದವೂ ನಡೆಯಿತು. ಹಾಗಿದ್ದರೂ ಕಾನೂನು ನಿಯಮವನ್ನು ಪಾಲಿಸುವುದು ಸೂಕ್ತ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.ಸಭೆಯಲ್ಲಿ ಆರ್ಟಿಒ ಅಧಿಕಾರಿ ಜಿ.ಎಸ್. ಹೆಗ್ಡೆ, ಎಸಿಪಿ (ಸಂಚಾರಿ) ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
ವರದಿ ಕೃಪೆ : ವಾಭಾ
Comments are closed.