ಕರಾವಳಿ

ನಮ್ಮ ಶರೀರದಲ್ಲಿ ಕೊಬ್ಬಿನಲ್ಲಿ ಕರಗಬಲ್ಲ ಮತ್ತು ನೀರಿನಲ್ಲ ಕರಗಬಲ್ಲ ವಿಟಾಮಿನ್ ಬಗ್ಗೆ ಗೊತ್ತೆ?

Pinterest LinkedIn Tumblr

ಎರಡು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಒಂದರಲ್ಲಿ ಒಂದು ಚಮಚ ಸಕ್ಕರೆ ಮತ್ತು ಇನ್ನೊಂದರಲ್ಲಿ ಒಂದು ಚಮಚ ಎಣ್ಣೆಯನ್ನು ಹಾಕಿ. ಈಗ ಅವುಗಳನ್ನು ಚೆನ್ನಾಗಿ ಮಿಶ್ರ ಮಾಡಿ. ಸಕ್ಕರೆಯು ನೀರಿನಲ್ಲಿ ಸಂಪೂರ್ಣವಾಗಿ ಕರಗಿರುತ್ತದೆ ಮತ್ತು ಅದನ್ನು ಕುಡಿಯಬಹುದಾಗಿದೆ. ಅತ್ತ ಇನ್ನೊಂದು ಗ್ಲಾಸಿನಲ್ಲಿಯ ಎಣ್ಣೆಯು ವಿಭಜನೆಗೊಂಡು ಸಣ್ಣ ಸಣ್ಣ ಹನಿಗಳು ನೀರಿನ ಮೇಲೆ ತೇಲುತ್ತಿರುತ್ತವೆ ಮತ್ತು ನಿರುಪಯುಕ್ತವಾಗಿರುತ್ತದೆ. ಇದೇ ರೀತಿ ನಮ್ಮ ಶರೀರದಲ್ಲಿ ಕೊಬ್ಬಿನಲ್ಲಿ ಕರಗಬಲ್ಲ ಮತ್ತು ನೀರಿನಲ್ಲ ಕರಗಬಲ್ಲ ಎರಡು ವಿಧಗಳ ವಿಟಾಮಿನ್ಗಳಿರುತ್ತವೆ.

ನೀರಿನಲ್ಲಿ ಕರಗಬಲ್ಲ ವಿಟಾಮಿನ್ಗಳನ್ನು ನಮ್ಮ ಶರೀರವು ಸುಲಭವಾಗಿ ಹೀರಿಕೊಳ್ಳುತ್ತದೆ ಮತ್ತು ಅವು ಅಷ್ಟೇ ಸುಲಭವಾಗಿ ವಿಸರ್ಜನೆಗೊಳ್ಳುತ್ತವೆ. ವಿಟಾಮಿನ್ ಬಿ ಮತ್ತು ಸಿ ಇವುಗಳಲ್ಲಿ ಸೇರಿವೆ. ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್ಗಳನ್ನು ನಮ್ಮ ಶರೀರದಲ್ಲಿಯ ಕೊಬ್ಬು ಹೀರಿಕೊಳ್ಳುತ್ತದೆ ಮತ್ತು ನಮ್ಮ ಕೊಬ್ಬು ಕೋಶಗಳಲ್ಲಿ ಸಂಗ್ರಹವಾಗಿರುತ್ತದೆ. ವಿಟಾಮಿನ್ ಎ,ಡಿ,ಇ ಮತ್ತು ಕೆ ಇವುಗಳಲ್ಲಿ ಸೇರಿವೆ.

ವಿಟಾಮಿನ್ ಡಿ ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್ ಆಗಿದ್ದು, ಅದನ್ನು ನಮ್ಮ ಕರುಳಿನಲ್ಲಿಯ ಕೊಬ್ಬು ಹೀರಿಕೊಳ್ಳುತ್ತದೆ. ನೀವು ಹಿಂದೆ ವೈದ್ಯಕೀಯ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳಿದ್ದರೆ ಅವರು ನಿಮ್ಮ ಶರೀರದಲ್ಲಿ ವಿಟಾಮಿನ್ ಡಿ ಕೊರತೆಯಿದೆಯೇ ಎನ್ನುವುದನ್ನು ಪರೀಕ್ಷಿಸಿ, ಕೊರತೆಯಿದ್ದರೆ ಅದನ್ನು ನೀಗಿಸಲು ಪೂರಕಗಳನ್ನು ನೀಡಿರುವ ಸಾಧ್ಯತೆಯಿದೆ.

ವಿಟಾಮಿನ್ ಡಿ ಕೊರತೆಯಿದ್ದಲ್ಲಿ ಅದನ್ನು ಸರಿದೂಗಿಸಲು ಪೂರಕ ಮಾತ್ರೆಗಳನ್ನು ಸೇವಿಸುವುದು ಸಂಕೀರ್ಣ ಸಂಗತಿಯೇನಲ್ಲ. ನೀವು ವಾರಕ್ಕೊಮ್ಮೆ, ಒಂದು ಮಾತ್ರೆಯನ್ನು ತೆಗೆದುಕೊಂಡರೆ ಆ ಕೆಲಸವಾಗುತ್ತದೆ. ಆದರೆ ನೀವು ಈ ಪೂರಕಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಿದ್ದೀರಾ ಎನ್ನುವುದು ಮುಖ್ಯವಾಗುತ್ತದೆ. ವಿಟಾಮಿನ್ ಡಿ ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್ ಆಗಿರುವುದರಿಂದ ಅದನ್ನು ಶರೀರವು ಹೀರಿಕೊಳ್ಳಲು ಕೊಬ್ಬಿನ ಅಗತ್ಯವಿದೆ. ಕೊಬ್ಬಿನ ಅನುಪಸ್ಥಿತಿಯಲ್ಲಿ ಈ ಹೀರಿಕೆ ಅಪೂರ್ಣವಾಗುತ್ತದೆ.

ಹಾಗಿದ್ದರೆ ವಿಟಾಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಆ ಕುರಿತು ಮಾಹಿತಿ….

*ದಿನದ ದೊಡ್ಡ ಊಟದೊಂಂದಿಗೆ
ಕ್ಲೀವ್ಲ್ಯಾಂಡ್ ಕ್ಲಿನಿಕ್ನ ಅಧ್ಯಯನದಂತೆ ದಿನದ ದೊಡ್ಡ ಊಟದೊಂದಿಗೆ ವಿಟಾಮಿನ್ ಡಿ ಅನ್ನು ಸೇವಿಸಿದರೆ ರಕ್ತದಲ್ಲಿಯ ವಿಟಾಮಿನ್ ಡಿ ಮಟ್ಟವು ಶೇ.50ರಷ್ಟು ಹೆಚ್ಚುತ್ತದೆ. ನಮ್ಮ ದಿನದ ದೊಡ್ಡ ಊಟವು ಹೆಚ್ಚಿನ ಕೊಬ್ಬನ್ನು ಒಳಗೊಂಡಿರುವುದರಿಂದ ಈ ವಿಟಾಮಿನ್ನ ಹೀರಿಕೆಯಲ್ಲಿ ನೆರವಾಗುವುದು ಇದಕ್ಕೆ ಕಾರಣವಾಗಿದೆ.

*ಹಾಲಿನೊಂದಿಗೆ
ದಿನದ ದೊಡ್ಡ ಊಟದೊಂದಿಗೆ ಸಾಧ್ಯವಾಗದಿದ್ದರೆ ಹಾಲಿನೊಂದಿಗೆ ವಿಟಾಮಿನ್ ಪೂರಕಗಳನ್ನು ತೆಗೆದುಕೊಳ್ಳಬಹುದು. ಹಾಲು ಮ್ಯಾಗ್ನೀಷಿಯಂ ಅನ್ನೂ ಒಳಗೊಂಡಿದ್ದು, ಇದು ಕೊಬ್ಬಿನಲ್ಲಿ ಕರಗಬಲ್ಲ ವಿಟಾಮಿನ್ಗಳ ಹೀರುವಿಕೆಯನ್ನು ಉತ್ತೇಜಿಸುತ್ತದೆ.

ವಿಟಾಮಿನ್ ಡಿ ನಮ್ಮ ಶರೀರವು ಕ್ಯಾಲ್ಶಿಯಂ ಮತ್ತು ರಂಜಕಗಳನ್ನು ಬಳಸಿಕೊಳ್ಳಲು ನೆರವಾಗುವ ಜೊತೆಗೆ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂದು ಹೆಚ್ಚಿನವರ ಜೀವನಶೈಲಿ ನಿಂತ ನೀರಾಗಿದೆ ಮತ್ತು ನಾವು ಬಿಸಿಲಿಗೂ ಹೆಚ್ಚು ತೆರೆದುಕೊಳ್ಳುತ್ತಿಲ್ಲ. ಹೀಗಾಗಿ ವಿಟಾಮಿನ್ ಡಿ ಕೊರತೆ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ. ಆದರೆ ವಿಟಾಮಿನ್ ಡಿ ಪೂರಕಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಔಷಧಿಗಳ ಸೇವನೆಯ ನಡುವೆ ತೆಗೆದುಕೊಳ್ಳಬಾರದು. ಶರೀರವು ವಿಟಾಮಿನ್ ಡಿ ಅನ್ನು ಗರಿಷ್ಠ ಮಟ್ಟದಲ್ಲಿ ಹೀರಿಕೊಳ್ಳಲು ಈ ಪೂರಕಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದು ಅಗತ್ಯವಾಗಿದೆ.

Comments are closed.