ಕರಾವಳಿ

ಸಹಕಾರ ಕ್ಷೇತ್ರದಲ್ಲಿ ದ.ಕ.ಜಿಲ್ಲೆಯ ಸಾಧನೆ ಅಮೋಘ : ರಾಜ್ಯ ಮಟ್ಟದ ಸಹಕಾರ ಸಪ್ತಾಹ ಉದ್ಘಾಟಿಸಿ ಸಚಿವ ಜಾರಕಿಹೊಳಿ

Pinterest LinkedIn Tumblr

ಮಂಗಳೂರು, ನವೆಂಬರ್.15:  64ನೇ ಅಖಿಲ ಭಾರತ ಸಹಕಾರ ಸಪ್ತಾಹ-2017 ಅಂಗವಾಗಿ ಬುಧವಾರ ನಗರದ ಕೇಂದ್ರ ಮೈದಾನದ ಫುಟ್ಬಾಲ್ ಗ್ರೌಂಡ್‌ನಲ್ಲಿ ರಾಜ್ಯ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ನೇತ್ರತ್ವದಲ್ಲಿ ‘ಸಹಕಾರ ಸಂಸ್ಥೆಗಳು: ಉತ್ಪಾದಕರಿಂಗ ಗ್ರಾಹಕರವರೆಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾದ ಈ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ ನಿ., ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ತೆಂಗಿನ ನಾರಿನ ಮಹಾಮಂಡಳ ನಿ., ಬೆಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಮಂಗಳೂರು, ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳ ನಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಲಿ., ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ., ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆ ಕೈಜೋಡಿಸಿತ್ತು.

ರಾಜ್ಯದ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಅವರು 64ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜಕೀಯರಹಿತವಾದ ಪರಸ್ಪರ ಸಹಕಾರ ಮೂಲಕ ಬೆಳೆದ ಕ್ಷೇತ್ರ ಸಹಕಾರಿ ರಂಗವಾಗಿದ್ದು, ಈ ಕ್ಷೇತ್ರದಲ್ಲಿ ದ.ಕ. ಜಿಲ್ಲೆ ವಿಶೇಷ ಸ್ಥಾನವನ್ನು ಪಡೆದಿದೆ. ಪಕ್ಷ, ಜಾತಿಯ ಹಂಗಿಲ್ಲದೆ ಸಹಕಾರ ಕ್ಷೇತ್ರ ಬೆಳೆದಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಇದರ ಜತೆಯಲ್ಲೇ ಜಿಲ್ಲೆ ಸುಳ್ಳು ಪ್ರಚಾರಗಳಿಗೆ ಆದ್ಯತೆ ನೀಡದೆ ಶಾಂತಿಯನ್ನು ಬೆಳೆಸಿಕೊಂಡಾಗ ಸಹಕಾರ ರಂಗ ಇನ್ನಷ್ಟು ಬೆಳೆಯಲಿದೆ ಎಂದು ಸಚಿವರು ಶುಭಾ ಹಾರೈಸಿದರು.

ಸಹಕಾರ ಜಾಥಾವನ್ನು ಉದ್ಘಾಟಿಸಿದ ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ವಿ.ಸದಾನಂದ ಗೌಡ ಅವರು. ಆರ್ಥಿಕ ಕ್ಷೇತ್ರವನ್ನು ಸಬಲೀಕರಣಗೊಳಿಸಲು ಸಹಕಾರಿ ಕ್ಷೇತ್ರ ಪೂರಕ. ಇದು 2012ರಲ್ಲಿ ವಿಶ್ವದಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಾಗ ಭಾರತದಲ್ಲಿ ಆರ್ಥಿಕ ಸದೃಢತೆಯನ್ನು ಕಾಯ್ದುಕೊಳ್ಳುವ ಮೂಲಕ ಸಾಬೀತಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸಹಕಾರ ಧ್ವಜಾರೋಹಣಗೈದರು. ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಂದಿನಿಯ ಹೆಲ್ಡಿ ಲೈಫ್ ಲೈಟ್ ಡಬಲ್ ಟೋನ್ಡ್ ಮಿಲ್ಕ್ ಮತ್ತು 50 ಮಿ.ಲೀ. ಹಾಗೂ 100 ಮಿ.ಲೀಟರ್ ಪೆಟ್ ಜಾರ್ಗಳಲ್ಲಿ ನಂದಿನಿ ತುಪ್ಪವನ್ನು ಬಿಡುಗಡೆಗೊಳಿಸಲಾಯಿತು.

ಇದೇ ವೇಳೆ ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರ ಗೌಡ ವಿ.ಮಾಲಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸ್ವಾಗತಿಸಿದರು. ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಲದ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ, ಹರೀಶ್ ಆಚಾರ್ಯ, ಧರ್ಮಗೌಡ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಆಕರ್ಷಕ ಸಹಕಾರ ಜಾಥಾ :

ಸಪ್ತಾಹದ ಉದ್ಘಾಟನೆಗಿಂತ ಮುಂಚಿತವಾಗಿ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಕೊಡಿಯಾಲ್‌ಬೈಲ್, ಮಂಗಳೂರು ಇದರ ಪ್ರಧಾನ ಕಛೇರಿಯ ಆವರಣದಿಂದ ನೆಹರೂ ಮೈದಾನದವರೆಗೆ ಆಕರ್ಷಕ ಟ್ಯಾಬ್ಲೋಗಳಿಂದ ಕೂಡಿದ ಸಮುದಾಯದತ್ತ ಸಹಕಾರ ಜಾಥಾವನ್ನು ಆಯೋಜಿಸಲಾಗಿತ್ತು.

ಮೊಳಹಳ್ಳಿ ಶಿವರಾಯರ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಸಹಕಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ತಬ್ಧ ಚಿತ್ರಗಳು, ಡೊಳ್ಳುಕುಣಿತ, ವೀರಗಾಸೆ, ಕೇರಳ ಚೆಂಡೆ, ಕಲ್ಲಡ್ಕ ಗೊಂಬೆ ಮುಂತಾದ 22 ವಿವಿಧ ಮನೋರಂಜನಾ ತಂಡಗಳೊಂದಿಗೆ ಅದ್ದೂರಿಯ ಸಮುದಾಯದತ್ತ ಸಹಕಾರ ಜಾಥಾ ನಡೆಯಿತು.

Comments are closed.