ಕರಾವಳಿ

ಸುಜ್ಲಾನ್ ಕಂಪೆನಿ ಲಾಕ್ ಔಟ್: ಬೀದಿಗೆ ಬಿದ್ದರು 600ಕ್ಕೂ ಅಧಿಕ ಕಾರ್ಮಿಕರು

Pinterest LinkedIn Tumblr

ಉಡುಪಿ: ಆ ಕಂಪೆನೀನ ನಂಬಿ ನೂರಾರು ಕುಟುಂಬ ಬದುಕು ಕಟ್ಟಿಕೊಂಡಿತ್ತು. ಹೇಳಿಕೇಳಿ ಆ ಕಂಪೆನಿ ಬಹುರಾಷ್ಟ್ರೀಯ ಕಂಪೆನಿ ಬೇರೆ.. ಆದ್ರೆ ಕಳೆದ ರಾತ್ರಿ ಏಕಾಏಕಿ ಕಂಪೆನಿ ಲಾಕ್ ಔಟ್ ಮಾಡಿ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ. ಇದ್ರಿಂದಾಗಿ ಬೀದಿಗೆ ಬಂದಿರೋ ನೂರಾರು ಕಾರ್ಮಿಕರು ದಿಕ್ಕು ತೋಚದಾಗಿದ್ದಾರೆ.. ಸದ್ಯ ಪ್ರತಿಭಟನೆ ಹಾದಿ ಹಿಡಿದಿರೋ ಕಾರ್ಮಿಕರು ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ..

ಹೌದು, ಬಹುರಾಷ್ಟ್ರೀಯ ಕಂಪೆನಿಯೊಂದು ಕಾರ್ಮಿಕರ ಬದುಕಲ್ಲಿ ಚೆಲ್ಲಾಟವಾಡಿ, ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಿದೆ. ರಾತ್ರೋರಾತ್ರಿ ಕಂಪೆನಿಗೆ ಬೀಗಜಡಿದು ಅಧಿಕಾರಿಗಳೇ ಲಾಕ್ ಓಟ್ ಮಾಡಿದ್ದಾರೆ. ಲಾಕ್ ಔಟ್ ಮಾಡಿರೋ ಕಂಪೆನಿ ತನ್ನೆಲ್ಲಾ ತಪ್ಪನ್ನು ಕಾರ್ಮಿಕರ ಮೇಲೆ ಹಾಕಿ ಏಟು ತಪ್ಪಿಸಿಕೊಳ್ಳೋ ಪ್ರಯತ್ನ ಬೇರೆ ಮಾಡಿದೆ. ಉಡುಪಿಯ ನಂದಿಕೂರಿನಲ್ಲಿರುವ ಗಾಳಿಯಂತ್ರ ಬ್ಲೇಡ್ ಕಂಪೆನಿಯೇ ಈ ರೀತಿ ರಾತ್ರೋರಾತ್ರಿ ಕಣ್ಣಾಮುಚ್ಚಾಲೆ ಆಡಿ ಕಾರ್ಮಿಕರ ಕಣ್ಣಿಗೆ ಮಣ್ಣೆರಚಿದೆ. ಕಂಪೆನಿಗೆ ತುಂಬಾ ನಷ್ಟವಾಗಿದ್ದು, ಕಾರ್ಮಿಕರ ಕೆಲಸದಲ್ಲಿನ ಅದಕ್ಷತೆಯೇ ಇದಕ್ಕೆ ಕಾರಣ ಅಂತ್ಹೇಳಿ ಉದ್ದನೆಯ ನೋಟೀಸನ್ನು ಅಧಿಕಾರಿಗಳು ತನ್ನ ಮುಖ್ಯದ್ವಾರದ ಗೇಟ್ ಗೆ ಅಂಟಿಸಿ ಲಾಕ್ ಔಟ್ ಮಾಡಿದ್ದಾರೆ.

ಇದು ಕಂಪೆನಿಯ ಏಕಾಏಕಿ ನಿರ್ಧಾರ ಅಂತ ಕಾರ್ಮಿಕರು ದೂರಿಕೊಂಡಿದ್ದಾರೆ. ಬೆಳಿಗ್ಗೆ ಕೆಲಸಕ್ಕೆಂದು ಬರುತ್ತಿದ್ದಂತೆಯೇ ಕಾರ್ಮಿಕರು ಲಾಕ್ ಔಟ್ ನೋಟೀಸ್ ಕಂಡು ದಂಗುಬಡಿದಂತಾಗಿದ್ದಾರೆ. ಆದ್ರೆ ಸುಜ್ಲಾನ್ ಕಂಪೆನಿ ಅಧಿಕಾರಿಗಳು ಲಾಕ್ ಔಟ್ ಮಾಡೋದಕ್ಕೂ ಮುಂಚೆಯೇ ಸಾಕಷ್ಟು ತಾಲೀಮು ನಡೆಸಿದ್ದಾರೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಕಳೆದ ವಾರವಷ್ಟೇ ಸುಮಾರು ನೂರಾರು ಗುತ್ತಿಗೆ ಕಾರ್ಮಿಕರನ್ನು ಹೊರಗಟ್ಟುವ ಪ್ರಯತ್ನ ಮಾಡಿತ್ತು. ಅಲ್ಲದೇ ಆರು ತಿಂಗಳ ಹಿಂದಷ್ಟೇ 700 ಮಂದಿ ಗುತ್ತಿಗೆ ಕಾರ್ಮಿಕರಿಗೂ ಗೇಟ್ ಪಾಸ್ ನೀಡಿತ್ತು. ಈ ರೀತಿ ಕಾರ್ಮಿಕರ ಬದುಕಲ್ಲಿ ಚೆಲ್ಲಾಟವಾಡುತ್ತಾ ಬಂದಿರೋ ಸುಜ್ಲಾನ್ ಕಂಪೆನಿಯ ಲಾಕ್ ಔಟ್ ನಿಂದಾಗಿ ಇದೀಗ ಗುತ್ತಿಗೆ ಆಧಾರಿತ ಕಾರ್ಮಿಕರ ಸಹಿತ 600ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬರುವಂತಾಗಿದೆ.

ಸದ್ಯ ಕೆಲಸ ಕಳೆದುಕೊಂಡು ಕಂಗಾಲಾಗಿರೋ ಕಾರ್ಮಿಕರು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಯೊಂದು ಕದ್ದುಮುಚ್ಚಿ ಮಾಡಿಕೊಂಡಿರೋ ಲಾಕ್ ಔಟ್ ನಿಂದಾಗಿ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಂಪೆನಿಗಳ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಬಡಪಾಯಿ ಕಾರ್ಮಿಕರು ಬೀದಿಗೆ ಬಂದು ನಿಲ್ಲುವ ಪರಿಸ್ಥಿತಿ ಕರಾವಳಿ ಭಾಗದಲ್ಲಿ ಮತ್ತೆ ಮುಂದುವರೆದಂತಾಗಿದೆ.

 

 

 

Comments are closed.