ಕರಾವಳಿ

`ಡ್ರಗ್ಸ್ ದ ಕಿಲ್ಲರ್, ಸೇ ನೋ ಟು ಡ್ರಗ್ಸ್ ಆಂಡ್ ಸೇವ್ ಉಳ್ಳಾಲ್

Pinterest LinkedIn Tumblr

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ

ಉಳ್ಳಾಲ: ಶಿಕ್ಷಣ ಪದ್ಧತಿ ನೈತಿಕತೆಯನ್ನು ಕಳೆದುಕೊಳ್ಳುತ್ತಿದ್ದು, ಶಿಕ್ಷಿತ ಯುವಸಮುದಾಯ ಸಾಗುತ್ತಿರುವ ದಾರಿಗಳನ್ನು ಅವಲೋಕಿಸುವ ಸಂದರ್ಭ ಎದುರಾಗಿದೆ. ಅವರನ್ನು ಸರಿದಾರಿಗೆ ತರುವ ಪ್ರಯತ್ನ ಸಂಘಟನೆಗಳಿಂದ ಆಗಬೇಕಿದೆ ಎಂದು ಉಳ್ಳಾಲ ನಗರಸಭೆ ಸದಸ್ಯ ಫಾರುಕ್ ಉಳ್ಳಾಲ್ ಹೇಳಿದ್ದಾರೆ.

ಅವರು ಮಂಗಳೂರಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದ ಸಮುದಾಯ ಭವನದಲ್ಲಿ ಆಯೋಜಿಸಿದ್ದ `ಡ್ರಗ್ಸ್ ದ ಕಿಲ್ಲರ್, ಸೇ ನೋ ಟು ಡ್ರಗ್ಸ್ ಆಂಡ್ ಸೇವ್ ಉಳ್ಳಾಲ್ ಅನ್ನುವ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂತ ಶ್ರೇಷ್ಟರು ಹುಟ್ಟಿ ಬೆಳೆದ ಪವಿತ್ರವಾದ ಉಳ್ಳಾಲದಲ್ಲಿ ಇಂದು ಯುವಸಮುದಾಯ ಮಾದಕ ವ್ಯಸನಿಗಳ ದಾಸರಾಗುತ್ತಿದ್ದಾರೆ. ತಾತ್ವಿಕತೆ ಬದ್ಧತೆಯಿಂದ ರಾಜಕಾರಣ ನಡೆಸಿದಂತಹ ರಾಜಕಾರಣಿಗಳು ಆಳಿದ ಉಳ್ಳಾಲದ ಪಾವಿತ್ರ್ಯತೆಯನ್ನು ಉಳಿಸುವ ಕಾರ್ಯ ಯುವಸಮುದಾಯದಿಂದ ಆಗಬೇಕಿದೆ. ಊರನ್ನು ಶುದ್ಧ ಮಾಡುವ ಮುನ್ನ ಮನೆಯನ್ನು ಶುದ್ಧಗೊಳಿಸುವ ಅನಿವಾರ್‍ಯತೆಯೂ ಎದುರಾಗಿದೆ.

ಇತ್ತೀಚೆಗೆ ಮಸೀದಿ ಕಟ್ಟಡದಲ್ಲಿ ಕಾರ್‍ಯಾಚರಿಸುತ್ತಿರುವ ಬೇಕರಿಯೊಂದಕ್ಕೆ ಹಫ್ತಾ ಬೆದರಿಕೆಯೊಡ್ಡಿದ್ದ ಮಾದಕ ವ್ಯಸನಿಗಳ ತಂಡದ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಿದ್ದಂತಹ ಕಾರನ್ನೇ ತಂಡ ಪುಡಿಗೈದಿತ್ತು. ಆದರೆ ತಾನೊಬ್ಬ ರಾಜಕಾರಣಿಯಾಗಿ ಪ್ರಭಾವ ಬಳಸಿಕೊಂಡು ಪೊಲೀಸರು ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡರು. ಆದರೆ ಜನಸಾಮಾನ್ಯ ಧ್ವನಿ ಎತ್ತಿದಲ್ಲಿ ಮುಕ್ಕಚ್ಚೇರಿಯಲ್ಲಿ ಹತ್ಯೆಗೀಡಾದ ಜುಬೈರ್ ನಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೊಡೆದವನು, ಕಡಿದವನು ರಾಜಕೀಯ ಪಕ್ಷದಲ್ಲಿ ಮಿಂಚುವ ಕಾಲ ಇದಾಗಿದ್ದು, ಯುವಸಮುದಾಯ ಒಗ್ಗಟ್ಟಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಿ‌ಎಫ್ ಐ ಅಧ್ಯಕ್ಷ ಮಹಮ್ಮದ್ ಅತಾವುಲ್ಲಾ ವಹಿಸಿದ್ದರು. ಸಿ‌ಎಫ್ ಐ ರಾಜ್ಯಾಧ್ಯಕ್ಷ ಮಹಮ್ಮದ್ ತಫ್ಸೀರ್ , ಹೊಸಪಲ್ಲಿ ಜುಮಾ ಮಸೀದಿ ಖತೀಬರಾದ ಯೂಸುಫ್ ಮಿಸ್ಬಾಹಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ನಿನ ಮಹಮ್ಮದ್ ಯು.ಬಿ, ಸಿ.ಎಫ್.ಐ ಪ್ರಧಾನ ಕಾರ್‍ಯದರ್ಶಿ ಅತಾವುಲ್ಲ , ಉಳ್ಳಾಲ ನಗರಸಭೆ ಮಾಜಿ ಸದಸ್ಯ ಯು.ಮಹಮ್ಮದ್, ಎಸ್ ಡಿಪಿ‌ಐ ಉಳ್ಳಾಲ ನಗರಸಭಾ ಸಮಿತಿ ಅಧ್ಯಕ್ಷ ಎ.ಆರ್.ಅಬ್ಬಾಸ್, ಉಪಾಧ್ಯಕ್ಷ ನೌಷಾದ್ ಕಲ್ಕಟ್ಟ , ರಾಯಿಫ್ ಉಳ್ಳಾಲ್, . ಸಿ‌ಎಫ್ ಐ ಪ್ರಧಾನ ಕಾರ್‍ಯದರ್ಶಿ ಇಮ್ರಾನ್ ಉಪಸ್ಥಿತರಿದ್ದರು ಸ್ವಾಗತಿಸಿದರು.

Comments are closed.