ಮಂಗಳೂರು, ಅಕ್ಟೋಬರ್.26: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂದು ನಡೆಯ ಬೇಕಿದ್ದ ಸಾಮಾನ್ಯ ಸಭೆಯನ್ನು ಮುಂದೂಡಿದ ಘಟನೆ ನಡೆದಿದೆ. ಸಾಮಾನ್ಯ ಸಭೆಗೆ ವಿರೋಧ ಪಕ್ಷದ ಸದಸ್ಯರು ಬಹಿಷ್ಕಾರದ ಹಾಕಿದ್ದು, ಕೋರಂ ಇಲ್ಲದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.
ಒಟ್ಟು 36 ಸದಸ್ಯ ಬಲದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ಸಂಸದರು, ಶಾಸಕರು, ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಒಟ್ಟು 52 ಮಂದಿ ಸದಸ್ಯರಿದ್ದಾರೆ. ಸಭೆ ನಡೆಸಲು 26 ಮಂದಿಯ ಕೋರಂ ಇರಬೇಕು. ಆದರೆ, ಬಿಜೆಪಿಯ 21 ಸದಸ್ಯರು ಮತ್ತು ಒಬ್ಬ ತಾಲೂಕು ಪಂ. ಅಧ್ಯಕ್ಷರು ಮಾತ್ರ ಹಾಜರಾಗಿದ್ದರು. ಕೋರಂ ಇಲ್ಲದ ಹಿನ್ನೆಲೆಯಲ್ಲಿ ನಿಯಮಾವಳಿಯಂತೆ, ಅರ್ಧ ಗಂಟೆ ಕಾದು ಸಭೆ ಮುಂದೂಡಲಾಯಿತು.
ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 16ರಂದು ನಡೆದ ಸಾಮಾನ್ಯ ಸಭೆಯ ಮುಂದುವರಿದ ಸಭೆ ಇಂದು ನಿಗದಿಪಡಿಸಲಾಗಿತ್ತು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಬಹಿಷ್ಕರಿಸಿ ಗೈರು ಹಾಜರಾಗಿದ್ದರು. ನಿಗದಿತ 11 ಗಂಟೆಗೆ ಸಭೆ ಆರಂಭಗೊಂಡು, ಅರ್ಧ ತಾಸು ಕಳೆದರೂ ವಿರೋಧ ಪಕ್ಷದ ಸದಸ್ಯರಾರೂ ಸಭೆಗೆ ಆಗಮಿಸಿದ ಕಾರಣ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.
ಹಿಂದಿನ ಸಭೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಪಿಡಿಒ ಅವರನ್ನು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಒತ್ತಡಕ್ಕೆ ಮಣಿದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ವರ್ಗಾಯಿಸಲಾಗಿದೆ ಎಂದು ಹೇಳಿ, ಬಿಜೆಪಿ ಸದಸ್ಯರು ಗದ್ದಲ ನಡೆಸಿದ್ದರು.ಸಭೆಯಲ್ಲಿ ಉಸ್ತುವಾರಿ ಸಚಿವರನ್ನು ಗುರಿ ಮಾಡಲಾಗುತ್ತದೆ ಎಂದು ಕಾಂಗ್ರೆಸಿಗರು ಪ್ರತಿಭಟಿಸಿದ್ದರು. ಎರಡೂ ಕಡೆಯಿಂದ ವಾಗ್ವಾದ ಮುಂದುವರಿಯುತ್ತಿದ್ದಂತೆ, ‘ಇಲ್ಲಿ ಮರಳು ಸಮಸ್ಯೆ ತಲೆದೋರಿದೆ, ನಿಮ್ಮ ಉಸ್ತುವಾರಿ ಸಚಿವರು ಎಲ್ಲಿದ್ದಾರೆ’ ಎಂಬಂತೆ ಅಧ್ಯಕ್ಷರು ಹೇಳಿದ್ದು, ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ, ಸದನದ ಬಾವಿಗಿಳಿದು, ಪ್ರತಿಭಟಿಸಿ, ಅಧ್ಯಕ್ಷರು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದ್ದರು.
ಪ್ರತಿಭಟನೆ ನಡುವೆ ಪಿಡಿಒ ವರ್ಗಾವಣೆ ಆದೇಶ ರದ್ದುಪಡಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಗದ್ದಲ ಹೆಚ್ಚಿ, ಸಭೆ ಸಂಜೆಯೂ ಮುಂದುವರಿದು, ನಂತರ ಮುಂದೂಡಲಾಗಿತ್ತು. ಇದೀಗ ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಗೆ ವಿರೋಧ ಪಕ್ಷದ ಸದಸ್ಯರಾರೂ ಆಗಮಿಸಿದ ಕಾರಣ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.