
ಮ0ಗಳೂರು ಅಕ್ಟೋಬರ್. 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅ.29ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಮಂತ್ರಿಗಳ ಆಗಮನದ ಪ್ರಯುಕ್ತ ಕೈಗೊಳ್ಳಬೇಕಾದ ಸಿದ್ಧತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಪ್ರಧಾನಿ ಭೇಟಿ ನೀಡುವ ಸ್ಥಳಗಳಲ್ಲಿ ಹಾಗೂ ಆಗಮನ-ನಿರ್ಗಮನ ಸಂದರ್ಭದಲ್ಲಿ ಯಾವುದೇ ಲೋಪಕ್ಕೆ ಅವಕಾಶ ನೀಡದೆ ಎಲ್ಲಾ ರೀತಿಯ ಸಿದ್ಧತೆಗಳನ್ನು ತ್ವರಿತವಾಗಿ ನಡೆಸಬೇಕು.
ವಿಮಾನ ನಿಲ್ದಾಣ, ಹೆಲಿಪ್ಯಾಡ್, ರಸ್ತೆ ಸಂಚಾರ, ಆಹಾರ, ವಾಹನದ ವ್ಯವಸ್ಥೆ, ಧರ್ಮಸ್ಥಳದ ಕಾರ್ಯಕ್ರಮ ಸ್ಥಳದಲ್ಲಿ ಸಕಲ ರೀತಿಯ ವ್ಯವಸ್ಥೆಯನ್ನು ಪ್ರಧಾನಿಯ ಭದ್ರತಾ ನಿಯಮಾನುಸಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಸಂದರ್ಭ ಮಳೆ ಬಂದರೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಪ್ರಧಾನಮಂತ್ರಿಯವರ ಭೇಟಿ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ದಳ(ಎಸ್‍ಪಿಜಿ) ಇಂದು ಜಿಲ್ಲೆಗೆ ಆಗಮಿಸಲಿದೆ. ಇದರೊಂದಿಗೆ ಮಂಗಳೂರು ನಗರ ಹಾಗೂ ದ.ಕ. ಜಿಲ್ಲಾ ಪೊಲೀಸರು ಭದ್ರತಾ ವ್ಯವಸ್ಥೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ರೇಣುಕಾ ಪ್ರಸಾದ್, ಡಾ. ರಘುನಂದನ ಮೂರ್ತಿ, ಡಿಸಿಪಿ ಹನುಮಂತರಾಯ, ವಿಮಾನ ನಿಲ್ದಾಣ ನಿರ್ದೇಶಕ ವೆಂಕಟೇಶ್ವರ ರಾವ್, ಸಿಐಎಸ್‍ಎಫ್, ಏರ್ ಇಂಡಿಯಾ ಅಧಿಕಾರಿಗಳು, ರಾಜ್ಯ ಸರಕಾರದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರದಾನಿ ಕಾರ್ಯಕ್ರಮದ ವಿವರ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅ.29ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.ಅಂದು ಬೆಳಿಗ್ಗೆ 10.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, 10.20ಕ್ಕೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಲಿದ್ದಾರೆ.
10.50- ಧರ್ಮಸ್ಥಳಕ್ಕೆ ಆಗಮನ, 11- ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ, 11.45- ಉಜಿರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ, 1- ಹೆಲಿಪ್ಯಾಡ್ ಆಗಮನ, 1.35 ಗಂಟೆಗೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ತೆರಳಲಿದ್ದಾರೆ.
Comments are closed.