ಕರಾವಳಿ

ಅತ್ಯಾಚಾರ ಹಾಗೂ ಕೊಲೆ ಬೆದರಿಕೆ: ಯುವತಿಯ ಚಿಕ್ಕಪ್ಪನಿಗೆ 10 ವರ್ಷ ಜೈಲು ವಾಸ!

Pinterest LinkedIn Tumblr

ಉಡುಪಿ: ಮನೆಯಲ್ಲಿ ಮಲಗಿದ್ದ ವೇಳೆ ಬಲವಂತವಾಗಿ ಅತ್ಯಾಚಾರ ನಡೆಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣ ರುಜುವಾತಾದ ಹಿನ್ನೆಲೆ ಆರೋಪಿಯಾದ ಯುವತಿಯ ಚಿಕ್ಕಪನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಕಾರ್ಕಳ ಕಾಂತಾವರ ಗ್ರಾಮದ ಬಾರಾಡಿ ಪುಂಕದಬೆಟ್ಟು, ತಿರ್ತೊಟ್ಟು ನಿವಾಸಿ ಮೋನಪ್ಪ ಪರವ ಎಂಬಾತನಿಗೆ 10 ವರ್ಷ ಜೈಲುವಾಸ ಶಿಕ್ಷೆ ವಿಧಿಸಿದೆ.

(ಸಾಂದರ್ಭಿಕ ಚಿತ್ರ)

ನೊಂದ ಯುವತಿಗೆ ಆರೋಪಿಯು ಸಂಬಂಧದಲ್ಲಿ ಚಿಕ್ಕಪ್ಪನಾಗಿರುತ್ತಾನೆ. ಈಕೆ 11-06-2015 ರಂದು ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ, ಬಾರಾಡಿ ಪುಂಕದಬೆಟ್ಟು, ತಿರ್ತೊಟ್ಟು, ಕೆಳಗಿನ ಮನೆ ಎಂಬಲ್ಲಿರುವ ಆರೋಪಿಯ ಮನೆಗೆ ಹೋಗಿ ಆ ದಿನ ರಾತ್ರಿ ಆರೋಪಿಯ ಮನೆಯಲ್ಲಿ ಉಳಕೊಂಡಿದ್ದಾಗ ಮಧ್ಯರಾತ್ರಿ ಆರೋಪಿ ಮೋನಪ್ಪ ಪರವ ಆಕೆ ಮಲಗಿದ್ದಲ್ಲೇ ಬಂದು ಬಾಯಿಯನ್ನು ಒತ್ತಿ ಹಿಡಿದು ಬೊಬ್ಬೆ ಹಾಕಿದರೆ ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಬಲಾತ್ಕಾರ ಮಾಡಿದ್ದ.

24-10-2017 ರಂದು ಉಡುಪಿಯ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಅತ್ಯಾಚಾರಿ ಆರೋಪಿಯಾದ ಮೋನಪ್ಪ ಪರವ ಎಂಬಾತನಿಗೆ ಐಪಿಸಿ ಸೆಕ್ಷನ್ 376ಕ್ಕೆ 10 ವರ್ಷಗಳ ಕಾಲ ಶಿಕ್ಷೆಯನ್ನು ಹಾಗೂ ಐಪಿಸಿ ಸೆಕ್ಷನ್ 506ಕ್ಕೆ 6 ತಿಂಗಳ ಸಜೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಜಿಲ್ಲಾ ನ್ಯಾಯಾಧೀಶರಾದ ಶ್ರೀ ವೆಂಕಟೇಶ್ ನಾಯ್ಕ ಇವರು ಸಾಕ್ಷಿದಾರರ ಸಾಕ್ಷ್ಯ ವಿಚಾರಣೆಯನ್ನು ನಡೆಸಿ ಆರೋಪಿಯ ವಿರುದ್ಧ ಇರುವ ಆಪಾದನೆ ಸಾಬೀತು ಆಗಿದೆ ಎಂದು ಅಭಿಯೋಜನೆ ಪರ ತೀರ್ಪು ನೀಡಿದ್ದಾರೆ. ಈ ತನಿಖೆಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ತನಿಖಾಧಿಕಾರಿ ನಾಯ್ಕರ್ ಜಿ.ಎಂ. ಇವರು ತನಿಖೆ ನಡೆಸಿದ್ದು, ಅಭಿಯೋಜನೆ ಪರ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು.

 

Comments are closed.