ಕರಾವಳಿ

ಉಳ್ಳಾಲ : ಹೆದ್ದಾರಿ ಪ್ರಯಾಣಿಕರ ದರೋಡೆಗೆ ಸಂಚು ಆರೋಪ – ಐವರು ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 23: ರಾಷ್ಟ್ರೀಯ ‌ಹೆದ್ದಾರಿ ಬದಿ ನಿಂತು ವಾಹನ ಸವಾರರನ್ನು ಬೆದರಿಸಿ ಚಿನ್ನಾಭರಣ ಸಹಿತ ಅವರ ಸೊತ್ತನ್ನು ಲೂಟಿ ಮಾಡಿ ದರೋಡೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪುತ್ತೂರು ದರ್ಬೆಯ ರವಿಕುಮಾರ್ ಯಾನೆ ಅಣ್ಣು (24), ಮಂಜೇಶ್ವರ ಗ್ರಾಮದ ಕುಂಜತ್ತೂರಿನ ಖಲೀಲ್ ಕೆ. ಯಾನೆ ಕಲ್ಲು (27), ಮಂಜೇಶ್ವರ ಕುಂಜತ್ತೂರಿನ ರಾಜೇಶ್ ಕೆ. (30), ಮಂಜೇಶ್ವರ ಗ್ರಾಮದ ಬಂಗ್ರಮಂಜೇಶ್ವರದ ಅಝೀಮ್ ಯಾನೆ ಮುಹಮ್ಮದ್ ಅಝೀಮ್ (23) ಮತ್ತು ಮಂಜೇಶ್ವರ ಗ್ರಾಮ ಕುಂಜತ್ತೂರಿನ ಜಾಬೀರ್ ಅಬ್ಬಾಸ್ ಯಾನೆ ಜಾಬೀರ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಕೇರಳದಿಂದ ಮಂಗಳೂರಿಗೆ ಬರುವ ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರನ್ನು, ಕಾರುಗಳನ್ನು, ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಹಾಗೂ ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರಿಂದ ಚಿನ್ನಾಭರಣ ಸಹಿತ ಸೊತ್ತುಗಳನ್ನು ಲೂಟಿಗೈಯ್ಯುವ ಸಂಚು ರೂಪಿಸಿತ್ತೆನ್ನಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಬ್ಬಿಣದ ತಲವಾರು, ಕಬ್ಬಿಣದ ರಾಡ್, ಮೆಣಸಿನ ಹುಡಿ,ಚೂರಿಗಳು ಮತ್ತು ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಪೈಕಿ ರಾಜೇಶ್, ಜಾವಿದ್, ಖಲೀಲ್ ಎಂಬವವರು ಕುಂಜತ್ತೂರು ಸಮೀಪ ಅ.19ರಂದು ಮಂಜೇಶ್ವರ ಠಾಣಾ ವ್ಯಾಪ್ತಿಯ ನಿವಾಸಿ ಪ್ರಜ್ವಲ್ ಎಂಬಾತನಿಗೆ ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ ಎನ್ನಲಾಗಿದೆ.

ರವಿಕುಮಾರ್ ಎಂಬಾತನ ಮೇಲೆ ಪುತ್ತೂರು ನಗರ ಠಾಣೆ, ಮಂಜೇಶ್ವರ ಠಾಣೆ, ಬರ್ಕೆ ಪೊಲೀಸ್ ಠಾಣೆ ಸಹಿತ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಖಲೀಲ್ನ ಮೇಲೆ 3 ಪ್ರಕಣಗಳಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಆರೋಪಿಗಳು ಕೇರಳದಿಂದ ಅಕ್ರಮ ಗಾಂಜಾ ಸಾಗಾಟ ದಂಧೆಯಲ್ಲಿ ತೊಡಗಿಸಿಕೊಂಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

ಉಳ್ಳಾಲ ಪೊಲೀಸ್ ಠಾಣಾ ನೀರೀಕ್ಷಕ ಗೋಪಿಕೃಷ್ಣ ಕೆ.ಆರ್., ಉಪ ನಿರೀಕ್ಷಕ ರಾಜೇಂದ್ರ ಬಿ. ಅವರು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳೊಂದಿಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ.ರಾಮರಾವ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಾರುಪಡಿಸಲಾಗಿದ್ದು, ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.