ಕರಾವಳಿ

ಪಾಲಿಕೆಯಿಂದ ಅಮಾನವೀಯ ಕೃತ್ಯ ಆರೋಪ : ಸಿಪಿಎಂ ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.21: ಮಂಗಳೂರು ಮಹಾನಗರ ಪಾಲಿಕೆಯು ಕಾರ್ಮಿಕರನ್ನು ಡ್ರೈನೇಜ್ ಗುಂಡಿಗೆ ಇಳಿಸಿ ಕೆಲಸ ಮಾಡಿಸಿರುವ ಹಿನ್ನೆಲೆಯಲ್ಲಿ ಪಾಲಿಕೆಯ ವಿರುದ್ಧ ಸಿಪಿಎಂ ಮಂಗಳೂರು ನಗರ ಸಮಿತಿ ಇಂದು ಬೆಳಗ್ಗೆ ಪಾಲಿಕೆ ಕಚೇರಿಯೆದುರು ಪ್ರತಿಭಟನೆ ನಡೆಸಿತು.

ಪ್ರತಿಭಟನಕಾರರನ್ನುದ್ದೇಶಿಸಿ ಸಿ.ಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಮನಪಾ ವ್ಯಾಪ್ತಿಯಲ್ಲಿ ವ್ಯಾಪಕಗೊಂಡಿರುವ ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸುವ ಮೂಲಕ ಮನಪಾವು ಅಮಾನವೀಯ ಕೃತ್ಯ ಎಸಗಿದೆ.

ಬಂದರು ಹಾಗೂ ಡಾನ್ ಬೋಸ್ಕೊ ಹಾಲ್ ಪ್ರದೇಶದ ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿದಂತಹ ಅಮಾನವೀಯ ಕೃತ್ಯ ಎಸಗಿರುವ ತಪ್ಪಿತಸ್ಥ ಮನಪಾ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ವಾಸುದೇವ ಉಚ್ಚಿಲ್, ಸಂತೋಷ್ ಬಜಾಲ್, ಎಂ.ದೇವದಾಸ್, ರಘು ಎಕ್ಕಾರ್, ಸುರೇಶ ಬಜಾಲ್, ತಿಮ್ಮಯ್ಯ ಕೊಂಚಾಡಿ, ನಿತಿನ್ ಕುತ್ತಾರ್ ಮೊದಲಾದವರು ಭಾಗವಹಿಸಿದ್ದರು.

Comments are closed.