
ಮಂಗಳೂರು, ಫೆಬ್ರವರಿ.11: ನಗರದಲ್ಲಿ ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ತಿಳಿಸಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾಜ ಘಾತುಕ ಚಟುವಟಿಕೆಗೆ ಸಂಬಂಧಿಸಿ ಹಲವು ಕೊಲೆ, ಕೊಲೆ ಯತ್ನ, ಅತ್ಯಾಚಾರ, ದರೋಡೆ ಪ್ರಕರಣಗಳ ಆರೋಪಿ ಆಕಾಶ ಭವನ ಶರಣ್(32) ಎಂಬ ಆರೋಪಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಆಕಾಶ ಭವನ ಶರಣ್ ಮೇಲೆ 4 ಕೊಲೆ ಪ್ರಕರಣ, 1 ಕೊಲೆ ಯತ್ನ, 1 ಅತ್ಯಾಚಾರ, 3 ದರೋಡೆ ಯತ್ನ ಸೇರಿದಂತೆ 17 ಪ್ರಕರಣ ದಾಖಲಾಗಿವೆ. ಇವುಗಳು ನ್ಯಾಯಾಲಯದ ವಿಚಾರಣೆಯಲ್ಲಿದ್ದರೂ ಆರೋಪಿಯು ತನ್ನ ಸಮಾಜಘಾತುಕ ಚಟುವಟಿಕೆಗಳನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈತನನ್ನು ಗೂಂಡಾ ಕಾಯ್ದೆಯಡಿ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದರು.

ಇನ್ನೋರ್ವ ಆರೋಪಿ ಸಾರ್ವಜನಿಕ ಸ್ಥಳ, ಶಾಲಾ-ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ರಹೀಂ ಯಾನೆ ಚಪ್ಪೆತಣ್ಣಿ ರಹೀಂ(37) ಎಂಬಾತನ ವಿರುದ್ದ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ. ಚಪ್ಪೆತಣ್ಣಿ ರಹೀಂ ಸಾರ್ವಜನಿಕ ಸ್ಥಳ, ಶಾಲಾ ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಾದ್ದಾನೆ. ಈತನ ವಿರುದ್ಧನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಗೂಂಡಾ ಕಾಯ್ದೆ ಪ್ರಕಾರ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಶುಕ್ರವಾರದಂದು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಮ್. ಶಾಂತರಾಜು ಹಾಗೂ ಡಾ.ಸಂಜೀವ್ ಎಮ್. ಪಾಟೀಲ್ ಉಪಸ್ಥಿತರಿದ್ದರು.

Comments are closed.