ಕರಾವಳಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಿರಿಕ್ ಪಾರ್ಟಿ’ ರಿಷಬ್; ಡೈರೆಕ್ಟರ್‌ಗೆ ಜೊತೆಯಾದ ಸಾಪ್ಟ್‌ವೇರ್

Pinterest LinkedIn Tumblr

ಕುಂದಾಪುರ: ಅಲ್ಲಿ ಸಂಭ್ರಮವೋ ಸಂಭ್ರಮ. ನಿತ್ಯ ಆಕ್ಷನ್ ಕಟ್ ಹೇಳ್ತಿದ್ದ ಆ ವ್ಯಕ್ತಿಯ ಮುಖದಲ್ಲಿ ಮಂದಹಾಸದ ಜೊತೆಗೆ ಏನೋ ಒಂಥರಾ ಕಳೆ. ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲು ಬರುತ್ತಿದ್ದ ಚಿತ್ರರಂಗದ ನಟ-ನಟಿಯರು. ಅಂದ ಹಾಗೆ ಅಲ್ಲಿ ನಡಿತಿದ್ದಿದ್ದು ಶೂಟಿಂಗ್ ಅಲ್ಲ. ಬದಲಾಗಿ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಯುವ ನಿರ್ದೇಶಕ ರಿಷಬ್ ಶೆಟ್ಟಿಯವರ ಮದುವೆ. ಈ ಮದುವೆ ಸಮಾರಂಭದ ಒಂದು ಝಲಕ್ ಇಲ್ಲಿದೆ ನೋಡಿ.

ಕಿರಿಕ್ ಪಾರ್ಟಿ…ಇತ್ತೀಚೆಗೆ ಸೂಪರ್ ರೆಸ್ಫಾನ್ಸ್ ಪಡೆಯುತ್ತಿರುವ ಕನ್ನಡ ಮೂವಿ. ಇದರ ನಿರ್ದೇಶಕ ರಿಷಬ್ ಶೆಟ್ಟಿ ಈಗಾಗಲೇ ರಿಕ್ಕಿ ಹಾಗೂ ಉಳಿದವರು ಕಂಡಂತೆ ಮೊದಲಾದ ಹಿಟ್ ಸಿನೆಮಾಗಳನ್ನು ನೀಡಿ ಸಕ್ಸಸ್ ಎನಿಸಿಕೊಂಡವರು. ಇತ್ತೀಚೆಗಷ್ಟೇ ಬಿಡುಗಡೆಯಾದ ಕಿರಿಕ್ ಪಾರ್ಟಿ ಸಿನೆಮಾವೂ ಕೂಡ ಸಖತ್ ಹೆಸರು ಮಾಡಿದ್ದಲ್ಲದೇ ದಾಖಲೆಯ ಯಶಸ್ಸಿನತ್ತ ಸಾಗುತ್ತಿದ್ದ ಹಾಗೆಯೇ ರಿಷಬ್ ಶೆಟ್ಟಿಯವರು ಕೂಡ ತಮ್ಮ ವೈವಾಹಿಕ ಜೀವನದ ಸುಮಧುರ ಕ್ಷಣಗಳಿಗೆ ಕಾಲಿಡುತ್ತಿದ್ದಾರೆ. ಮೂಲತಃ ಉಡುಪಿ ಜಿಲ್ಲೆ ಕುಂದಾಪುರದ ಕೆರಾಡಿಯವರಾದ ರಿಷಬ್ ಶೆಟ್ಟಿ ಸಪ್ತಪದಿ ತುಳಿಯುತ್ತಿರುವುದು ಕೂಡ ಕುಂದಾಪುರದಾಕೆಯನ್ನು ಎಂಬುದು ಮತ್ತೊಂದು ವಿಶೇಷ. ಉಡುಪಿಯ ಮಂದರ್ತಿಯವರಾದ ಪ್ರಗತಿಯವರ ಕುಟುಂಬ ಸದ್ಯ ಶಿವಮೊಗ್ಗದ ರಿಪ್ಪನಪೇಟೆಯಲ್ಲಿ ನೆಲೆಸಿದೆ. ಪ್ರಗತಿ ಸಾಪ್ಟ್‌ವೇರ್ ಉದ್ಯೋಗಿಯಾಗಿದ್ದು ಸಹೋದರಿಯ ಮೂಲಕ ರಿಷಬ್ ಶೆಟ್ಟಿಯವರಿಗೆ ಪ್ರಗತಿಯ ಪರಿಚಯ ಆಗಿತ್ತಂತೆ. ಸದ್ಯ ಮನೆಯ ಗುರುಹಿರಿಯರ ಒಪ್ಪಿಗೆ ಪಡೆದು ಅವರ ಸಮ್ಮುಖದಲ್ಲಿ ಅರೆಂಜ್ಡ್ ಮ್ಯಾರೆಜ್ ಆಗಿದ್ದಾರೆ ಯುವ ನಿರ್ದೇಶಕ ರಿಷಬ್ ಶೆಟ್ಟಿ.

ಕುಂದಾಪುರದ ಕೋಟೇಶ್ವರದ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಮದುವೆ ಸಮಾರಂಭ ಜೋರಾಗಿತ್ತು. ಮಧ್ಯಾಹ್ನ 12.25ರ ಶುಭ ಮುಹೂರ್ತದಲ್ಲಿ ರಿಷಬ್ ಮನಮೆಚ್ಚಿದ ಹುಡುಗಿ ಪ್ರಗತಿ ಶೆಟ್ಟಿ ಜೊತೆ ಸಪ್ತಪದಿ ತುಳಿದ್ರು. ಮದುವೆಯಲ್ಲಿ ಎರಡು ಕುಟುಂಬದವರು, ಊರಿನವರು, ಗಣ್ಯಾತಿ ಗಣ್ಯರು ಪಾಲ್ಘೊಂಡಿದ್ರು. ಮದುವೆ ಸಮಾರಂಭಕ್ಕೆ ಆಗಮಿಸಿದ ನಟ ಸುದೀಪ್ ಅವರು ರಿಷಬ್ ಶೆಟ್ಟಿ ದಂಪತಿಗಳಿಗೆ ಶುಭ ಹಾರೈಸಿದ್ದಲ್ಲದೇ ಕೆಲಕಾಲ ಮದುವೆ ವೀಕ್ಷಿಸಿ ತೆರಳಿದ್ರು. ನಟ ರಕ್ಷಿತ್ ಶೆಟ್ಟಿ, ಕಿರಿಕ್ ಪಾರ್ಟಿ ಚಿತ್ರದ ನಟಿಯರಾದ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ, ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಸೇರಿದಂತೆ ಸಂಪೂರ್ಣ ಚಿತ್ರತಂಡ ಮದುವೆ ಸಮಾರಂಭದಲ್ಲಿ ಸಂಪೂರ್ಣ ಭಾಗಿಯಾದ್ರು. ನಟಿಯರಾದ ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಮೇಘನಾ ಗಾಂವ್ಕರ್, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ನಿರ್ದೇಶಕ ಸುನಿ, ಹಾಸ್ಯನಟ ರಘು ಪಾಂಡೇಶ್ವರ್ ಮೊದಲಾದ ಚಿತ್ರರಂಗದ ಗಣ್ಯರು ಭೇಟಿ ನೀಡಿ ಶುಭ ಹಾರೈಸಿದ್ರು. ಇನ್ನು ರಿಷಬ್ ಶೆಟ್ಟಿಯವರ ಸಾವಿರಾರು ಅಭಿಮಾನಿಗಳು ಮದುವೆ ಸಮಾರಂಭಕ್ಕೆ ಸಾಕ್ಷಿಯಾದರು. ನಟನಟಿಯರ ಜೊತೆ ಸೆಲ್ಫಿ ತೆಗೆದುಕೊಳ್ಳುವುದರಲ್ಲೂ ಫ್ಯಾನ್ಸ್ ಬ್ಯುಸಿಯಾಗಿದ್ದು ಈ ವೇಳೆ ಕಂಡು ಬಂತು.

ಒಟ್ಟಿನಲ್ಲಿ ಸ್ಯಾಂಡಲ್ ವುಡಿಗೆ ಉತ್ತಮ ಚಿತ್ರಗಳನ್ನು ನೀಡಿದ ಕುಂದಾಪುರದ ಕುವರ ರಿಷಬ್ ಶೆಟ್ಟಿ ವೈವಾಹಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳಿಗೆ ಹ್ಯಾಪಿ ಮ್ಯಾರಿಡ್ ಲೈಫ್.

—————————–

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.