ಮಂಗಳೂರು : ಕೊಂಕಣಿ ಕವಿತೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿರುವ ಕವಿತಾ ಟ್ರಸ್ಟ್ ಕೊಡಮಾಡುವ ಮಥಾಯಸ್ ಕುಟುಂಬ ಕವಿತಾ ಪುರಸ್ಕಾರ ಇತ್ತೀಚಿಗೆ ನಗರದ ಕೆ. ಎಸ್. ರಾವ್ ರಸ್ತೆಯಲ್ಲಿರುವ ಗ್ಯಾಲರಿ ಓರ್ಕಿಡ್‌ನಲ್ಲಿ ಜರುಗಿದ ’ಕವಿತಾ ಸಂಭ್ರಮ್’ ಕಾರ್ಯಕ್ರಮದಲ್ಲಿ ಗೋವೆಯ ಕೊಂಕಣಿ ಕವಯಿತ್ರಿ ನೂತನ್ ಸಾಖರ್‌ದಾಂಡೆ ಇವರಿಗೆ ಕೊಡಲಾಯಿತು.
ಮಂಗಳೂರು ಉತ್ತರ ಶಾಸಕ ಜೆ.ಆರ್. ಲೋಬೋರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂತನ್‍ರವರಿಗೆ ರೂಪಾಯಿ 25,000, ಸ್ಮರಣಿಕೆ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲೋಬೋರವರು ವಿಶ್ವಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿ “ಇಂದು ಸುಮಾರು 7000 ಭಾಷೆಗಳು ಈ ಭೂಖಂಡದಲ್ಲಿವೆ. ಇದರಲ್ಲಿ ಸುಮಾರು ಅರ್ಧಪಾಲು ಭಾಷೆಗಳು ಈ ಶತಮಾನದ ಸಮಾಪ್ತಿಯ ಮೊದಲು ನಶಿಸಿ ಹೋಗಲಿವೆ. ಅವುಗಳ ಬಳಕೆ ಇಲ್ಲವಾಗುವ ಸಮಯ ಸಮೀಪದಲ್ಲಿರುವುದು ಈ ಮಾನವಕುಲದ ದೊಡ್ಡದೊಂದು ದುರಂತ. ಒಂದು ವೇಳೆ ಸಾಕಷ್ಟು ಪ್ರಯತ್ನ ನಡೆಯದೆ ಹೋದಲ್ಲಿ ಕೊಂಕಣಿಯಂತಹ ಭಾಷೆಗಳ ಪರಿಸ್ಥಿತಿಯೂ ಇದೇ ರೀತಿ ಆಗುವುದರಲ್ಲಿ ಸಂಶಯವಿಲ್ಲ. ನಮ್ಮ ಮನೆಗಳಿಂದ ಈಗಾಗಲೇ ಕೊಂಕಣಿಯನ್ನು ನಾವು ಹೊರದಬ್ಬಿದ್ದೇವೆ. ಭಾಷೆ ನಶಿಸುವುದೆಂದರೆ ಅದರ ಜೊತೆಗೆ ಸಂಸ್ಕೃತಿ ಕೂಡಾ ಮಾಯವಾದಂತೆ. ’ಗುಮ್ಮಟೆ’ ಯಂತಹ ಕೊಂಕಣಿ ಸಂಸ್ಕೃತಿ ಇಂದು ಒಂದು ನೆನಪು ಮಾತ್ರ” ಎಂದು ಹೇಳಿದರು.
ಕೊಂಕಣಿ ನಶಿಸಿ ಹೋಗದಂತೆ ನಾವೆಲ್ಲಾ ಕೊಂಕಣಿಗರು ಪ್ರಯತ್ನ ಪಡಬೇಕು. ಈ ದಿಶೆಯಲ್ಲಿ ನಮ್ಮ ಮನೆಗಳಲ್ಲಿ ಅದನ್ನು ಮಾತನಾಡಬೇಕು. ಕೇವಲ ಅಕಾಡೆಮಿಯಂತಹ ಸಂಸ್ಥೆಗಳು, ಲೇಖಕರು ಕೊಂಕಣಿ ಭಾಷೆಯನ್ನು ಕಾಪಾಡಲು ಪ್ರಯತ್ನ ಪಟ್ಟರೆ ಸಾಲದು, ಪ್ರತೀ ಕೊಂಕಣಿಗರು ತಮ್ಮ ಸಂಸ್ಕೃತಿ ಹಾಗೂ ಇತಿಹಾಸದ ಮೇಲೆ ಅಭಿಮಾನ ಪಟ್ಟು ಅದರಲ್ಲಿ ದಿನನಿತ್ಯ ವ್ಯವಹರಿಸಬೇಕು” ಎಂದು ಲೋಬೋರವರು ಹೇಳಿದರು.
ಇದೇ ಸಂದರ್ಭದಲ್ಲಿ ಕೊಂಕಣಿಯ ಹಿರಿಯ ಕವಿಗಳಾದ ಎಮ್. ಪಿ. ರೊಡ್ರಿಗಸ್‌ರವರ ’ರಸ್ತ್ಯಾ ದೆಗೆಚಿಂ ಫುಲಾಂ’ (ರಸ್ತೆ ಬದಿಯ ಹೂವುಗಳು) ಕವನ ಸಂಕಲನವನ್ನು ಶಾಸಕರು ಲೋಕಾರ್ಪಣೆ ಮಾಡಿದರು. “ಒಂದು ಕವಿತೆ ಮೊದಲ ಓದುವಿಕೆಯಲ್ಲಿ ಅರ್ಥವನ್ನು ಬಿಟ್ಟುಕೊಡುವುದಿಲ್ಲ. ವಾಚಕರು ತಮ್ಮದಾಗಿಸಬೇಕಾದರೆ ಮೂರು-ನಾಲ್ಕು ಸಲ ಓದಬೇಕಾಗುತ್ತದೆ. ಕವಿತೆ ಬರೆಯುವುದು ಕೂಡಾ ಒಮ್ಮೆಲೆ ಆಗುವ ಪ್ರಕ್ರಿಯೆಯಲ್ಲ. ಅದಕ್ಕೆ ನಿಜವಾದ ಪ್ರೇರಣೆ, ಸಂವೇದನೆ ಹಾಗೂ ಫಲವತ್ತಾದ ಅನುಭವ ಬೇಕಾಗಬಹುದು. ನನ್ನ ಬಹುತೇಕ ಕವಿತೆಗಳು ನಡುರಾತ್ರಿಯ ಸಮಯದಲ್ಲಿ ಸೂರ್ಯೋದಯಕ್ಕೆ ಕಾದು ಕುಳಿತು, ನಿದ್ರೆ ಬಾರದ ಪರಿಸ್ಥಿತಿಯಲ್ಲಿ ಕಷ್ಟಪಡುವಾಗ ಬರೆದದ್ದವುಗಳು” ಎಂದು ರೊಡ್ರಿಗಸ್ ನುಡಿದರು.
ಮಥಾಯಸ್ ಕುಟುಂಬ ಕವಿತಾ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ನೂತನ್ ಸಾಖರ್‌ದಾಂಡೆಯವರು ಕವಿತೆಯೆಂಬುದು ತನ್ನನ್ನು ಓರ್ವ ಮಾನವನನ್ನಾಗಿ ಜೀವಿಸಲು ಸಹಕಾರಿಯಾಗಿದೆ. ಈ ಪುರಸ್ಕಾರ ತನಗಾಗಿ ಅಲ್ಲ, ಕಾವ್ಯರಚನೆಗೆ ಸದಾ ಪ್ರಚೋದಿಸುತ್ತಿರುವ ತನ್ನಳೊಗಿನ ಹುಮ್ಮಸ್ಸಿಗೆ ಈ ಪ್ರಶಸ್ತಿ ಎಂದು ಹೇಳಿದರು.
ಕವಿತಾ ಟ್ರಸ್ಟ್ ಅಧ್ಯಕ್ಷ ಕಿಶೋರ್ ಗೊನ್ಸಾಲ್ವಿಸ್, ಕಾರ್ಯದರ್ಶಿ ಎವ್ರೆಲ್ ರೊಡ್ರಿಗಸ್ ಉಪಸ್ಥಿತರಿದ್ದರು.
Comments are closed.