ಕರಾವಳಿ

ಸಂಸದ ನಳಿನ್ ಕುಮಾರ್ ನೇತ್ರತ್ವದಲ್ಲಿ ಸಭೆ- ಕಂಬಳ ಉಳಿಸಲು ತೀವ್ರ ಹೋರಾಟಕ್ಕೆ ನಿರ್ಧಾರ

Pinterest LinkedIn Tumblr

ಮಂಗಳೂರು, ಜನವರಿ.24: ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ನಿಷೇಧದ ವಿರುದ್ಧ ಕಾನೂನು ಹೋರಾಟ ನಡೆಸುವ ಮೂಲಕ ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಂಗಳವಾರ ನಗರದ ಕುಂಟಿಕಾನ ಸಮೀಪವಿರುವ ಬಿ.ಎಮ್.ಎಸ್ ಹೊಟೇಲ್ ಸಭಾಂಗಣದಲ್ಲಿ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.

ಕಂಬಳದ ನಿಷೇಧದ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂಬಳವನ್ನು ಉಳಿಸುವ ಸಲುವಾಗಿ ಜ.28ರಂದು ಮೂಡಬಿದ್ರೆಯಲ್ಲಿ ನಡೆಯುವ ಕಂಬಳಕ್ಕೆ ಸಂಪೂರ್ಣ ಬೆಂಬಲ ನೀಡುವುದು, ಬುಧವಾರ ಮಂಗಳೂರಿಗೆ ಆಗಮಿಸುವ ಕೇಂದ್ರ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸುವುದು, ಅದಕ್ಕೆ ಪೂರ್ವಭಾವಿಯಾಗಿ ಜ.27ರಂದು ಬೆಳಗ್ಗೆ 10ಕ್ಕೆ ನಗರದ ಹಂಪನಕಟ್ಟೆಯಲ್ಲಿ ಮಾನವ ಸರಪಳಿ ನಡೆಸುವುದು ಮೊದಲಾದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಕೈಗೊಳ್ಳಲಾದ ಎಲ್ಲಾ ನಿರ್ಣಯಗಳಿಗೆ ಹಾಗೂ ಪಕ್ಷಾತೀತ, ಜ್ಯಾತ್ಯಾತೀತವಾಗಿ ನಡೆಯುವ ಹೋರಾಟಕ್ಕೆ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಬೆಂಬಲ ಘೋಷಿಸಿದರು.

ಇದೆ ಸಂದರ್ಭದಲ್ಲಿ ಕಂಬಳ ಹಿಂಸೆಯನ್ನು ಪ್ರಚೋದಿಸುವಂತಹ ಕ್ರೀಡೆ ಅಲ್ಲ. ಕಾಲ ಕಾಲಕ್ಕೆ ಪೌಷ್ಟಿಕ ಆಹಾರವನ್ನುಂಡು, ದೇಹಕ್ಕೆ ಸೂಕ್ತ ಮಸಾಜು ಮಾಡಿಸಿಕೊಂಡು, ಕೆಸರು ಗದ್ದೆಯಲ್ಲಿ ಓಡುವ ಕೋಣಗಳು ಅತ್ಯಂತ ಆರೋಗ್ಯದಾಯಕವಾಗಿರುತ್ತದೆ. ಕೃಷಿಗೆ ಬಳಸುವ ಎತ್ತುಗಳನ್ನಾದರೂ ನಿರ್ವಿರ್ಯಗೊಳಿಸುತ್ತಾರೆ. ಆದರೆ, ಕಂಬಳದ ಕೋಣಗಳು ಪುರುಷತ್ವವನ್ನು ಹೊಂದಿರುತ್ತವೆ ಎಂಬುದನ್ನೂ ನ್ಯಾಯಾಲಯ ಗಮನಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಕಂಬಳ ಸಮಿತಿ ಪರವಾಗಿ ಉಡುಪಿಯ ಶಶಿಕಿರಣ್ ಶೆಟ್ಟಿ ಹಾಗೂ ಕಂಬಳ ಮಾಲೀಕರ ಪರವಾಗಿ ಕುಂದಾಪುರದ ಪವನ್ ಕುಮಾರ್ ಶೆಟ್ಟಿ ಹೈಕೋರ್ಟ್‍ನಲ್ಲಿ ವಾದ ಮಂಡಿಸುತ್ತಿದ್ದಾರೆ. ಜ. 30ರಂದು ಹೈಕೋರ್ಟ್ ಕಂಬಳದ ಪರವಾಗಿ ತೀರ್ಪು ನೀಡುವ ವಿಶ್ವಾಸವಿದೆ. ಆದರೆ, ವ್ಯತಿರಿಕ್ತ ತೀರ್ಪು ಬಂದಲ್ಲಿ ಮತ್ತೊಮ್ಮೆ ಫೆ. 4-5ರಂದು ಮಂಗಳೂರಿನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಸಂಸದರು ಹೇಳಿದರು.

ಸಭೆಯಲ್ಲಿ ಬಾಳೆಕೋಡಿ ಮಠದ ಶಶಿಕಾಂತ ಮಣಿ ಸ್ವಾಮೀಜಿ, ನ್ಯಾಯವಾದಿ ಪವನ್ ಕುಮಾರ್ ಶೆಟ್ಟಿ. ತುಳು ಚಿತ್ರರಂಗ ನಿರ್ದೇಶಕ, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‍ಬೈಲ್, ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಮುಂತಾದವರು ಮತನಾಡಿದರು.

ಕರಾವಳಿಗರ, ರೈತರ ಪ್ರಮುಖ ಮನರಂಜನೆ, ಭಾವನೆಗಳ ಜೊತೆಗೆ ಮಿಳಿತವಾಗಿರುವ ಕ್ರೀಡೆ ಕಂಬಳ. ಕೋಣವನ್ನು ಅತ್ಯಂತ ಗೌರವಯುತವಾಗಿ ಕಂಬಳ ಕೆರೆಗೆ ತರಲಾಗುತ್ತದೆ. ಇದನ್ನು ನ್ಯಾಯಾಲಯ ಅರ್ಥಮಾಡಿಕೊಳ್ಳುತ್ತದೆ ಎಂದು ನಂಬಿದ್ದೇವೆ. ಸರ್ಕಾರವೇ ಈ ಕ್ರೀಡೆಗೆ ಮಾನ್ಯತೆ ನೀಡಿದೆ ಎಂಬುದು ಎಲ್ಲರ ಒಕ್ಕೋರಲಿನ ವಾದವಾಗಿತ್ತು.

ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ, ಕಂಬಿನ ಮನೆ, ಪದಾಧಿಕಾರಿಗಳಾದ ನಾಗರಾಜ್ ಶೆಟ್ಟಿ, ಬಾರ್ಕೂರು ಶಾಂತರಾಮ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ರಂಗಕಲಾವಿದರಾದ ನವೀನ್ ಡಿ.ಪಡೀಲ್, ಸುಂದರ ರೈ ಮಂದಾರ, ಡಾ. ಜೀವಂಧರ ಬಳ್ಳಾಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Comments are closed.