ಕರಾವಳಿ

ಯುವತಿಗೆ ಪ್ರೀತಿಸುವಂತೆ ಕಿರುಕುಳ; ಪ್ರಶ್ನಿಸಿದ್ದಕ್ಕೆ ಯುವತಿ ತಾಯಿಗೆ ಮಾರಣಾಂತಿಕ ಹಲ್ಲೆ

Pinterest LinkedIn Tumblr

ಕುಂದಾಪುರ: ಹೀಗೆ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಕಣ್ಣಿರಿಡುತ್ತಿರುವ ಇವರು ಕಳೆದ ಹದಿಮೂರು ವರ್ಷಗಳಿಂದ ಕುಂದಾಪುರದ ಫ್ಲ್ಯಾಟೊಂದರಲ್ಲಿ ಮಕ್ಕಳೊಂದಿಗೆ ನೆಲೆಸಿದವರು. ಆದರೇ ಈಗ ಅಲ್ಲಿ ಹೋಗೋಕು ಇವರಿಗೆ ಭಯವಾಗುತ್ತಂತೆ. ಅದಕ್ಕೂ ಕಾರಣವಿದೆ. ಅದೇ ಫ್ಲ್ಯಾಟಿನಲ್ಲಿ ನೆಲೆಸಿದ ಯುವಕನೊಬ್ಬ ನಿರಂತರವಾಗಿ ನೀಡುತ್ತಿರುವ ಕಿರುಕುಳ ಈ ಕುಟುಂಬವನ್ನು ಹೈರಾಣಾಗಿಸಿದೆ. ಅಷ್ಟಕ್ಕೂ ಆತ ಯಾರು? ಆತ ಇವರಿಗ್ಯಾಕೆ ಕಿರಿಕ್ ಮಾಡ್ತಿದ್ದಾನೆ ಅಂತೀರಾ? ಈ ವರದಿ ನೋಡಿ.

(ಹಲ್ಲೆಗೊಳಗಾದ ಸುಜಾತಾ)

(ಆರೋಪಿ ನಿತಿನ್)

ಕುಂದಾಪುರ ಸರಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಇವರ ಹೆಸರು ಸುಜಾತಾ ಗಾಣಿಗ. ಕಳೆದ ಹದಿಮೂರು ವರ್ಷಗಳಿಂದ ನಗರ ಫ್ಲ್ಯಾಟೊಂದರಲ್ಲಿ ನೆಲೆಸಿದವರು. ಇವರ ಪತಿ ಭಾಸ್ಕರ್ ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದು ಓರ್ವ ಪುತ್ರ ವ್ಯಾಸಂಗ ಮಾಡುತ್ತಿದ್ದಾರೆ, ಹಾಗೆಯೇ ಇವರ ಪುತ್ರಿ ಉಡುಪಿಯಲ್ಲಿ ನೌಕರಿ ಮಾಡ್ತಾರೆ. ಹೀಗೆ ತಮ್ಮ ಪಾಡಿಗೆ ತಾವಿದ್ದ ವೇಳೆ ಈ ಕುಟುಂಬಕ್ಕೆ ಆಘಾತ ನೀಡಲು ವಕ್ಕರಿಸಿಕೊಂಡವನೇ ನಿತಿನ್ ಎಂಬ ಯುವಕ. ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ಫ್ಲ್ಯಾಟಿಗೆ ಬಂದು ತನ್ನ ತಾಯಿಯ ಜೊತೆ ವಾಸವಿದ್ದ ಈತ ಆಸುಪಾಸಿನವರ ಪಾಲಿಗೆ ಕಿರಿಕ್ ಪಾರ್ಟಿಯಾಗಿದ್ದನಂತೆ. ಸುಜಾತಾ ಗಾಣಿಗರ ಪುತ್ರಿ ಕೆಲಸಕ್ಕೆ ತೆರಳಿ ಬರುವಾಗ ಈತ ಕಿಚಾಯಿಸುವುದು, ಆಕೆಯನ್ನು ಹಿಂಬಾಲಿಸುವುದು ಮಾಡುತ್ತಿದ್ದನಂತೆ. ಅಲ್ಲದೇ ತನಗೆ ಕರೆ ಮಾಡು, ಮೆಸ್ಸೇಜ್ ಮಾಡು ಎಂಬಂತೆಯೂ ಪೀಡಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಇದು ವಿಕೋಪಕ್ಕೆ ಹೋದ ಸಂದರ್ಭ ಸುಜಾತಾ ಅವರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದು ಒಂದಷ್ಟು ಸಮಯ ಆತ ತನ್ನ ದುರ್ನಡತೆಯನ್ನು ನಿಲ್ಲಿಸಿ ಸುಬುಗನಂತಿದ್ದ. ಆದರೇ ಕಳೆದ ಐದಾರು ತಿಂಗಳುಗಳಿಂದ ಈತನ ಹಳೆ ಚಾಳಿ ಮತ್ತೆ ಆರಂಭವಾಗಿದ್ದು ಸುಜಾತಾರವರ ಮಗಳಿಗೆ ಮತ್ತೆ ಕಾಟ ಕೊಡಲಾರಂಭಿಸಿದ್ದ.

ಮತ್ತೆ ತನ್ನ ಮಗಳಿಗೆ ಕಾಟ ನೀಡಲು ಆರಂಭಿಸಿದ ನಿತಿನ್ ವರ್ತನೆ ಬಗ್ಗೆ ಸುಜಾತಾ ಅಸಮಾಧಾನಗೊಂಡಿದ್ದರಲ್ಲದೇ ಮಗಳನ್ನು ಜಾಗರೂಕಳಾಗಿರು ಎಂದು ಹೇಳಿ ಆದಷ್ಟು ಮಗಳೊಂದಿಗೆ ತಾನೂ ಕೂಡ ಇರುತ್ತಿದ್ದರು. ಎಲ್ಲಿ ತನ್ನ ಚಾಳಿ ಮುಂದುವರೆಸಲು ಸುಜಾತಾ ಅಡ್ದಿಯಾದರೋ ನಿತಿನ್ ಈ ಬಗ್ಗೆ ಗರಂ ಆಗಿದ್ದ. ಭಾನುವಾರ ಸಂಜೆ ಕಾರ್ಯಕ್ರಮವೊಂದಕ್ಕೆ ತೆರಳಿ ತಾಯಿ ಮಗಳು ವಾಪಾಸ್ ಆಗುತ್ತಿದ್ದ ವೇಳೆ ಫ್ಲ್ಯಾಟಿನ ಲಿಪ್ಟ್ ಬಳಿ ಬಂದ ನಿತಿನ್ ಸುಜಾತಾ ಅವರಿಗೆ ಅಡ್ಡಗಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಲ್ಲದೇ ಅವ್ಯಾಚವಾಗಿ ನಿಂದಿಸಿ ಮುಖಕ್ಕೆ ಆಸಿಡ್ ಹಾಕುವ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೇ ಮೈಮೇಲಿನ ಬಟ್ಟೆಯನ್ನು ಹರಿದುಹಾಕಿ ಜೀವಬೆದರಿಕೆಯಿಟ್ಟು ಪರಾರಿಯಾಗಿದ್ದಾನೆಂದು ನೊಂದ ಸುಜಾತಾ ಆರೋಪಿಸುತ್ತಾರೆ. ಕೆನ್ನೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ರೀತಿಯಲ್ಲಿ ಏಟಾಗಿದ್ದಲ್ಲದೇ ಎದೆ ಭಾಗಕ್ಕೂ ಪೆಟ್ಟಾಗಿರುವ ಸುಜಾತಾ ಸದ್ಯ ಕುಂದಾಪುರ ಸರಕಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನ್ನ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗುತ್ತಿದ್ದಂತೆಯೇ ಆರೋಪಿ ನಿತಿನ್ ಕಣ್ಮರೆಯಾಗಿದ್ದಾನೆ. ಹಲ್ಲೆಗೊಳಗಾಗಿ ನೊಂದಿರುವ ಸುಜಾತಾ ಅವರಿಗೆ ಮಹಿಳಾ ಸಾಂತ್ವಾನ ಕೇಂದ್ರದವರು ಧೈರ್ಯ ನೀಡಿದ್ದಲ್ಲದೇ ಆರೋಪಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಒಂದೇ ಫ್ಲ್ಯಾಟಿನಲ್ಲಿ ನೆಲೆಸಿದ್ದ ಯುವಕನಿಂದಲೇ ಹಲ್ಲೆಗೊಳಗಾದ ಸುಜಾತಾ  ಮುಂದೆಯೂ ಆತನಿಂದಾಗುವ ಸಮಸ್ಯೆಯ ಬಗ್ಗೆ ಆಲೋಚಿಸಿ ಬೆದರುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಿ ನೊಂದ ಸುಜಾತಾ ಅವರಿಗೆ ನ್ಯಾಯ ಒದಗಿಸುವ ಜೊತೆಗೆ ತಪ್ಪಿತಸ್ಥ ಆರೋಪಿಗೆ ಶಿಕ್ಷೆಯಾಗಬೇಕಿದೆ.

———————————————–

Comments are closed.