ಕುಂದಾಪುರ: ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ಪರಿಸರದಲ್ಲಿ ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆಕಟ್ಟಿಕೊಂಡು, 94ಸಿ ಯೋಜನೆಯಡಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ೨ ವರ್ಷದಿಂದ ಕಾಯುತ್ತಿರುವ ಬಡ ಜನರಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವನಿಯೆತ್ತಿದ್ದು ತಿಂಗಳುಗಳ ಅಂತರದಲ್ಲಿ ಎರಡನೇ ಬಾರೀ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.





ಹಕ್ಕು ಪತ್ರ ನೀಡಲು ಸರಕಾರ ಹಾಗೂ ಅಧಿಕಾರಿಗಳು ತೋರುತ್ತಿರುವ ವಿಳಂಬ ನೀತಿ ಖಂಡಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇತ್ರತ್ವದಲ್ಲಿ ಕುಂದಾಪುರದಲ್ಲಿ ಇಂದು ಬ್ರಹತ್ ಪ್ರತಿಭಟನಾ ಸಭೆ ನಡೆಯಿತು. ಶಾಸ್ತ್ರೀ ವ್ರತ್ತದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ ಪೂಜಾರಿಯವರು ಕುಂದಾಪುರ ತಾಲೂಕಿನಲ್ಲಿ 7 ಸಾವಿರಕ್ಕೂ ಮಿಕ್ಕಿ 94ಸಿ ಮತ್ತು ಸಿಸಿ ಅರ್ಜಿದಾರರು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದು ಕೆಲವು ಗ್ರಾಮ ಪಂಚಾಯತ್‌ಗಳಲ್ಲಿ ಒಂದೂ ಹಕ್ಕು ಪತ್ರವನ್ನು ವಿತರಿಸಿಲ್ಲ. ತಾಲೂಕು ಕಛೇರಿಯಲ್ಲಿ ಹಕ್ಕು ಪತ್ರಗಳ ವಿತರಣೆಯ ಕೆಲಸಗಳೇ ನಡೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರ ಮನೆಯ ನಿವೇಶನಗಳ ಸರ್ವೆ ಹಾಗೂ ತನಿಖೆ ಕಾರ್ಯವೂ ನಡೆಯುತ್ತಿಲ್ಲ. ಕಿವುಡು ಹಾಗೂ ಕುರುಡು ಸರಕಾರ ಹಾಗೂ ಸ್ಥಳೀಯ ಆಡಳಿತ ಕಛೇರಿಗಳು ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಓರ್ವ ಶಾಸಕ ಹಾಗೂ ಮಾಜಿ ಮಂತ್ರಿಯ ಸ್ಥಾನದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ತಹಶಿಲ್ದಾರ್ ಕಛೇರಿಯೆದುರು ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿ ಮನವಿ ನೀಡಿ ತಿಂಗಳುಗಳದರೂ ಕೂಡ ನಿಷ್ಕರುಣಿ, ಜವಬ್ದಾರಿ ಮರೆತ, ಹೊಣೆಗೇಡಿತನದ ಅಧಿಕಾರಿಗಳಿಂದಾಗಿ, ಸರಕಾರದ ನಿರ್ಲಕ್ಷ್ಯ ಹಾಗೂ ಜೀವವಿಲ್ಲದ ಜಿಲ್ಲಾಡಳಿತದ ವಿರುದ್ಧ ನಮ್ಮ ಜನಾಕ್ರೋಷ ಇದಾಗಿದೆ. ಬಡವರ ಪರವಾಗಿ ಕೆಲಸ ಮಾಡಲು ಸಾಧ್ಯವಾದರೇ ಮಾಡಿ ಇಲ್ಲವಾದರೇ ಜಿಲ್ಲೆಯನ್ನು ಜಿಲ್ಲಾಧಿಕಾರಿಗಳು ಬಿಟ್ಟುಹೋಗಿ ಎಂದು ಆಗ್ರಹಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಜಿಲ್ಲಾ ಉಅಸ್ತುವಾರಿ ಸಚಿವರು ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಕನಿಷ್ಠ ಕಂದಾಯ ಇಲಾಖೆಯ ಅಧಿಕಾರಿಗಳು ವರದಿಯನ್ನೆ ಸಮರ್ಪಕಗೊಳಿಸಿಲ್ಲ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಬಡವರ ಹಕ್ಕುಪತ್ರಗಳ ಬಗ್ಗೆ ಸರಕಾರ ನೀಡಿದ ಭರವಸೆ ಅನುಷ್ಠಾನವಾಗುತ್ತಿಲ್ಲ. ಉಡುಪಿಯಲ್ಲಿ ಸ್ವತಃ ಕಂದಾಯ ಮಂತ್ರಿಗಳೆ ಒಂದು ತಿಂಗಳಲ್ಲಿ 94ಸಿ ಹಕ್ಕು ಪತ್ರಗಳನ್ನು ವಿತರಿಸಿ ವರದಿ ಕೊಡಿ ಎಂಬ ಆದೇಶಕ್ಕೆ ಕಂದಾಯ ಇಲಾಖೆಯಿಂದ ಸ್ಪಂದನವಿಲ್ಲ. ಈ ಬಗ್ಗೆ ಸರಕಾರ ಮತ್ತು ಕಂದಾಯ ಇಲಾಖೆಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಮುಂದಿನ ಒಂದೆರಡು ವಾರದಲ್ಲಿ ಈ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಹೋರಾಟ ಮತ್ತೆ ಉಘ್ರರೂಪ ತಾಳಲಿದೆ ಎಂದರು.
ಕುಂದಾಪುರ ಶಾಸ್ತ್ರೀ ವ್ರತ್ತದಿಂದ ಕಾಲ್ನಡಿಗೆ ಜಾಥಾದ ಮೂಲಕ ಕುಂದಾಪುರ ಮಿನಿವಿಧಾನಸೌಧ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇನ್ನೂರಕ್ಕೂ ಅಧಿಕ ಜನ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ವಾಹನದಲ್ಲಿ ಕರೆದೊಯ್ದು ಬಳಿಕ ಬಿಡುಗಡೆಗೊಳಿಸಿದರು. ಈ ಸಂದರ್ಭ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕಳಿಂಜೆ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಲ್ತಾರು ಗೌತಮ ಹೆಗ್ಡೆ, ಬಿಜೆಪಿ ಮುಖಂಡರಾದ ಕಿಶೋರ್ ಕುಮಾರ್, ಶಂಕರ ಅಂಕದಕಟ್ಟೆ, ಭಾಸ್ಕರ ಬಿಲ್ಲವ ಜಿಲ್ಲಾ ಪಂಚಾಯತ್ ಸದಸ್ಯರಾದ ಲಕ್ಷ್ಮೀ ಮಂಜು ಬಿಲ್ಲವ, ಶ್ರೀಲತಾ ಸುರೇಶ್ ಶೆಟ್ಟಿ, ಪ್ರತಾಪ ಹೆಗ್ಡೆ, ಶಂಕರ ಪೂಜಾರಿ, ಬಾಬು ಹೆಗ್ಡೆ, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷೆ ಪ್ರವೀಣ್ ಶೆಟ್ಟಿ ಕಡ್ಕೆ, ತಾ.ಪಂ. ಸದಸ್ಯರು, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ, ಯುವಮೋರ್ಚಾಧ್ಯಕ್ಷ ಶರತ್ ಶೆಟ್ಟಿ, ಮಹಿಳಾ ಮೋರ್ಚಾಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಿರುವ ಫಲಾನುಭವಿ ಜನರು ಉಪಸ್ಥಿತರಿದ್ದರು.
ವರದಿ- ಯೋಗೀಶ್ ಕುಂಭಾಸಿ
Comments are closed.