ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿಸಿ ಜನವರಿ 26ರಿಂದ ಮತ್ತೊಮ್ಮೆ ತೀವ್ರ ಹೋರಾಟ ನಡೆಸುವುದಾಗಿ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ನಡೆಸಿದ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಪರಿಸ್ಥಿತಿ ಬಿಗಡಾಯಿಸಲು ರಾಜಕಾರಣಿಗಳು ಹಾಗೂ ಅಧಿಕಾರಿಗಳೇ ಕಾರಣ. ಜಿಲ್ಲಾ ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ ಒಂದು ದಿನದಲ್ಲಿ ಸಮಸ್ಯೆ ಬಗೆಹರಿಸಬಹುದು. ಆದರೆ, ಅವರು ಮುತುವರ್ಜಿ ವಹಿಸುತ್ತಿಲ್ಲ ಎಂದು ದೂರಿದರು.
ಯಡಿಯೂರಪ್ಪ ಹೇಳಿಗೆ ಖಂಡನೆ:
ಎತ್ತಿನಹೊಳೆ ಯೋಜನೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೆಂಬಲ ಸೂಚಿಸಿರುವುದನ್ನು ನೇತ್ರಾವತಿ ಸಂಯುಕ್ತ ರಕ್ಷಣಾ ಸಮಿತಿ ವಿರೋಧಿಸುತದೆ. ಎತ್ತಿನಹೊಳೆ ಯೋಜನೆ ವಿಚಾರವಾಗಿ ಯಡಿಯೂರಪ್ಪ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಈ ವಿಚಾರವಾಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗುವುದು. ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸದಂತೆ ಅವರ ಮನವೊಲಿಸುವುದಾಗಿ ವಿಜಯಕುಮಾರ್ ಶೆಟ್ಟಿ ತಿಳಿಸಿದರು.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಳೆದ ನವೆಂಬರ್ 2 ರಂದು ನೀಡಿದ ಆದೇಶದ ಪ್ರಕಾರ ಜನವರಿ 14ರೊಳಗೆ ಸರ್ವೆ ವರದಿ ನೀಡಬೇಕಿತ್ತು. ಆದರೆ, ಇಲ್ಲಿಯವರೆಗೆ ನೀಡಿಲ್ಲ. ಇನ್ನು ಯೋಜನೆ ಕೈಗೆತ್ತಿಕೊಳ್ಳುವ ಜಾಗವನ್ನು ಬಿಟ್ಟು ಬೇರೆ ಕಡೆ ಸರ್ವೆ ನಡೆಸುತ್ತಿದ್ದಾರೆ ಎಂದು ವಿಜಯಕುಮಾರ್ ಶೆಟ್ಟಿ ಆರೋಪಿಸಿದರು.
ಎತ್ತಿನಹೊಳೆ ಯೋಜನೆ ವಿರೋಧಿಸಿ ಜ.26ರಿಂದ ಹೋರಾಟ ಮತ್ತೆ ಮುಂದುವರಿಯಲಿದೆ.ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಸಂಸದರವರೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಶೆಟ್ಟಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ, ವಿ.ಎಚ್.ಪಿ ಮುಖಂಡ ಸತ್ಯಜೀತ್ ಸುರತ್ಕಲ್ ಹಾಗೂ ನೇತ್ರಾವತಿ ಸಂರಕ್ಷಣಾ ಸಂಯುಕ್ತ ಸಮಿತಿಯ ಶಶಿರಾಕ್ ಶೆಟ್ಟಿ ಕೊಳಂಬೆ ಉಪಸ್ಥಿತರಿದ್ದರು.
Comments are closed.