ಕರಾವಳಿ

ಬಿಜೈಯಲ್ಲಿ ಸ್ವಾಮಿ ವಿವೇಕಾನಂದ ಉದ್ಯಾನವನ ಹಾಗೂ ವಿವೇಕಾನಂದರ ಪ್ರತಿಮೆ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು, ಜನವರಿ.18: ನಗರದ ಬಿಜೈ ಚರ್ಚ್ ಬಳಿ (ಕೊಡಿಯಾಲ್ ಬೈಲ್ 30ನೆ ವಾರ್ಡ್ ನಲ್ಲಿ) ನಿರ್ಮಿಸಲಾದ ಸ್ವಾಮಿ ವಿವೇಕಾನಂದರ ನೂತನ ಉದ್ಯಾನವನವನ್ನು ಶಾಸಕ ಜೆ.ಆರ್.ಲೋಬೊ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಲಾದ ವಿವೇಕಾನಂದರ ಪ್ರತಿಮೆಯನ್ನು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಅನಾವರಣಗೊಳಿಸಿದರು.

ಬಳಿಕ ಸ್ವಾಮಿ ವಿವೇಕಾನಂದರ 154ನೆ ಜನ್ಮೋತ್ಸವ ಕಾರ್ಯಕ್ರಮವು ಬಿಜೈ ಚರ್ಚ್ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಉದ್ಘಾಟಿಸಿದರು. ಯುವಕರಿಂದ ದೇಶದ ಉತ್ತಮ ಭವಿಷ್ಯ ನಿರ್ಮಿಸಲು ಸಾಧ್ಯ ಎಂದು ವಿಶ್ವಾಸವಿರಿಸಿಕೊಂಡವರು ವಿವೇಕಾನಂದರು. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡಿದ ತಪಸ್ವಿಯ ಹೆಸರಿನಲ್ಲಿ ಉದ್ಯಾನವನ ನಿರ್ಮಿಸಿರುವುದು ಶ್ಲಾಘನೀಯ ಎಂದು ಸ್ವಾಮಿ ಜಿತಕಾಮಾನಂದಾಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ತ್ಯಾಜ್ಯಗಳಿಂದಲೇ ತುಂಬಿದ್ದ ಜಾಗವನ್ನು ಸುಂದರ ಉದ್ಯಾನವನವನ್ನಾಗಿ ಮಾಡುವಲ್ಲಿ ಭಂಡಾರಿ ಬಿಲ್ಡರ್ಸ್ನ ಅಧ್ಯಕ್ಷ ಲಕ್ಷ್ಮೀಶ ಭಂಡಾರಿಯವರ ಕೊಡುಗೆ ಅಪಾರ. ಜತೆಗೆ ಉದ್ಯಾನವನ ನಿರ್ಮಿಸುವಲ್ಲಿ ಶ್ರಮಿಸಿದ ಸ್ಥಳೀಯ ಮನಪಾ ಸದಸ್ಯ ಪ್ರಕಾಶ್ ಸಾಲಿಯಾನ್ ಅವರ ಆಸಕ್ತಿ ಗಮನಾರ್ಹ ಎಂದು ಬಿಜೈ ಚರ್ಚ್ನ ಧರ್ಮಗುರು ರೆ. ಫಾ. ವಿಲ್ಸನ್ ಎಲ್. ವೈಟಸ್ ಹೇಳಿದರು. ನಾವು ಬದುಕುವ ಸುತ್ತಮುತ್ತಲಿನ ಪ್ರದೇಶ ಶುಚಿಯಾಗಿದ್ದರೆ ಮನಸ್ಸು ಪ್ರಶಾಂತವಾಗಿರುತ್ತದೆ.ಇದರಿಂದ ಉತ್ತಮ ಕೆಲಸಮಾಡಲು ಸಾಧ್ಯ ಎಂದು ಫಾದರ್ ಹೇಳಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉದ್ಯಾನವನದ ಪ್ರಾಯೋಜಕ ಭಂಡಾರಿ ಬಿಲ್ಡರ್ಸ್ನ ಅಧ್ಯಕ್ಷ ಲಕ್ಷ್ಮೀಶ ಭಂಡಾರಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿಲಾಟ್ ಪಿಂಟೊ, ಎಸ್.ಅಪ್ಪಿ, ಮಾಜಿ ಮೇಯರ್ ಮಹಾಬಲ ಮಾರ್ಲ, ಪಾಲಿಕೆ ಸದಸ್ಯರಾದ ಕೇಶವ ಮರೋಳಿ, ಎ.ಸಿ.ವಿನಯರಾಜ್, ರಜನೀಶ್, ಅಖಿಲಾ ಆಳ್ವ, ಮುಹಮ್ಮದ್, ಲತೀಫ್, ಶಿರ್ಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ವಿಶ್ವಾಸ್ ಕುಮಾರ್ ದಾಸ್, ಉದ್ಯಾನವನ ಸಮಿತಿಯ ಪಧಾಧಿಕಾರಿಗಳಾದ ರಘುರಾಜ್ ಕದ್ರಿ, ಮಮತಾ ಶೆಟ್ಟಿ, ದೇವಿ ಪ್ರಸಾದ್ ಕದ್ರಿ, ಸ್ಥಳೀಯರಾದ ರಾಘವೇಂದ್ರ ಆಚಾರ್, ಭಂಡಾರಿ ಬಿಲ್ಡರ್ಸ್ನ ಕನ್ಸಲ್ಟಂಟ್ ವೇಣು ಶರ್ಮ ಮುಂತಾದವರು ಉಪಸ್ಥಿತರಿದ್ದರು.

ಉದ್ಯಾನವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಪ್ರಕಾಶ್ .ಬಿ. ಸಾಲ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಿತಿ ಕಾರ್ಯದರ್ಶಿ ರಘುರಾಜ್ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

Comments are closed.