ಕರಾವಳಿ

‘ಶಾಂತಿ, ಸೌಹಾರ್ದ ಮತ್ತು ರಾಷ್ಟ್ರೀಯ ಭಾವೈಕ್ಯಕ್ಕಾಗಿ ಅಂತರ್ಧರ್ಮೀಯ ಚಿಂತಕರ ಸಮಾವೇಶ

Pinterest LinkedIn Tumblr

ಮಂಗಳೂರು,ಜ.10: ರೈಟ್ಸ್ ಅವಾರ್ನೆಸ್ ಆಯಂಡ್ ನಾಲೇಜ್ ಸೊಸೈಟಿ (ರ್ಯಾಂಕ್ಸ್) ವತಿಯಿಂದ ‘ಶಾಂತಿ, ಸೌಹಾರ್ದ ಮತ್ತು ರಾಷ್ಟ್ರೀಯ ಭಾವೈಕ್ಯಕ್ಕಾಗಿ ಅಂತರ್ಧರ್ಮೀಯ ಚಿಂತಕರ ಸಮಾವೇಶ’ ಸೋಮವಾರ ನಗರದ ಹೋಟೆಲ್ ಓಶಿಯಲ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.

ಸಮಾವೇಶವನ್ನುದ್ದೇಶಿಸಿ ವಿವಿಧ ಧರ್ಮದ ಪ್ರಮುಖರು ಮಾತನಾಡಿದರು. ಶಾಂತಿಯ ಮಂತ್ರವೇ ಎಲ್ಲ ಧರ್ಮಗಳ ಮೂಲವಾಗಿದೆ. ಸ್ವಾರ್ಥದಿಂದ ದ್ವೇಷ, ಅಶಾಂತಿ, ಯುದ್ಧಗಳು ಸಂಭವಿಸಿದರೆ, ನಿಸ್ವಾರ್ಥದಿಂದ ಮಾತ್ರ ಶಾಂತಿ ಸಾಧ್ಯ. ಅಶಾಂತಿ ಇದ್ದಲ್ಲಿ ಅಭಿವೃದ್ಧಿ ಅಸಾಧ್ಯ. ಹಿಂದೂ – ಮುಸ್ಲಿಂ ನಾಯಕರು ಒಂದಾದರೆ ಅನುಯಾಯಿಗಳೂ ಒಂದಾಗುತ್ತಾರೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಪಾಕಿಸ್ತಾನವು ಭಾರತ ಆಗುವ ತನಕ ಸಾವಿರ ವರ್ಷ ಯುದ್ಧ ಮಾಡುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಖಂಡ ಭಾರತ ಸ್ಥಾಪನೆಯಾದರೆ ಮಾತ್ರ ಶಾಂತಿ ಸಾಧ್ಯ ಎಂದು ನಾನು ಕೂಡಾ ಮನಃಪೂರ್ವಕವಾಗಿ ಪುನರುಚ್ಚರಿಸುತ್ತೇನೆ ಎಂದು ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.ದೇಶದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಮುಸ್ಲಿಮ್ ರಾಷ್ಟ್ರೀಯ ಮಂಚ್ ಸ್ಥಾಪಿಸಲಾಗಿದೆ. ಇದೀಗ 1.5 ಲಕ್ಷ ಮಂದಿ ಮಂಚ್ನೊಂದಿಗಿದ್ದಾರೆ. ಗಲಭೆ ನಡೆದಲ್ಲೆಲ್ಲಾ ತೆರಳಿ ಸಂಬಂಧ ಬೆಳೆಸಲಾಗುತ್ತದೆ ಎಂದು ಅವರು ಹೇಳಿದರು.

ಕ್ರೈಸ್ತ ಧರ್ಮಗುರು ಫಾ.ವಲೇರಿಯನ್ ಡಿಸೋಜ ಮಾತನಾಡಿ, ಒಳ್ಳೆಯವರನ್ನು ಜನರು ಅನುಕರಿಸುತ್ತಾರೆ. ದೇವರನ್ನು ನಂಬುವವರು ಎಂದೂ ದ್ವೇಷ ಸಾಧಿಸಲಾರರು ಎಂದು ಹೇಳಿದರು.

ಹೊಸದೆಹಲಿಯ ಮತಪಂಡಿತ ಡಾ.ಉಮರ್ ಅಹ್ಮದ್ ಇಲ್ಯಾಸಿ ಮಾತನಾಡಿ, ಪರಸ್ಪರ ವಿಶ್ವಾಸ ಮತ್ತು ಪ್ರತಿಯೊಂದು ಧರ್ಮಗಳ ಬಗ್ಗೆ ಪರಸ್ಪರ ಗೌರವ ಹಾಗೂ ಭಾರತೀಯತೆಯನ್ನು ಅಳಗವಡಿಸಿಕೊಂಡರೆ ದೇಶದಲ್ಲಿ ಶಾಂತಿ, ಸೌಹಾರ್ದ ನೆಲಸುತ್ತದೆ ಎಂದು ಹೇಳಿದರು.

ಜಾಗತಿಕ ನಿಯಮದಲ್ಲಿ ಜನ್ಮಭೂಮಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವ್ಯಕ್ತಿಯೊಬ್ಬನನ್ನು ಗುರುತು ಹಿಡಿಯುವುದು ಆತನ ದೇಶದಿಂದಾಗಿದೆ. ಈ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ವಿಶ್ವದಲ್ಲಿ ಯಾವುದೇ ಕಲಹಗಳು ಉಂಟಾಗಲು ಸಾಧ್ಯವಿಲ್ಲ ಎಂದು ಮುಸ್ಲಿಮ್ ರಾಷ್ಟ್ರೀಯ ಮಂಚ್ ಮಾರ್ಗದರ್ಶಕ ಇಂದ್ರೇಶ್ ಕುಮಾರ್ ಹೇಳಿದರು.

ಬೆಂಗಳೂರು ಅಗಸ್ತ್ಯ ಆಶ್ರಮದ ರಮೇಶ್ ಗುರೂಜಿ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಶುಭ ಹಾರೈಸಿದರು. ರ್‍ಯಾಂಕ್ಸ್ ಅಧ್ಯಕ್ಷ ಹಾಗು ನಿವೃತ್ತ ಐಪಿಎಸ್ ಡಾ.ಎಂ.ಎನ್. ಕೃಷ್ಣಮೂರ್ತಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿ ಡಾ.ಪ್ರಶಾಂತ್ ವಂದಿಸಿದರು.

Comments are closed.