ಕರಾವಳಿ

ಪಿಲಿಕುಳ : ಹತ್ತು ದಿನಗಳ ಕರಕುಶಲ ಮಾರಾಟ ಮೇಳಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು,ಜನವರಿ,7 : ಭಾರತ ಸರಕಾರದ ಜವಳಿ ಮಂತ್ರಾಲಯದ ಕರಕುಶಲ ನಿಗಮದ ಪ್ರಾಯೋಜಕತ್ವದಲ್ಲಿ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‌ನಲ್ಲಿ ಜನವರಿ 15ರವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ಕರಕುಶಲ ಮಾರಾಟ ಮೇಳವನ್ನು ಹಂಪಿ ವಿಶ್ವವಿದ್ಯಾನಿಲಯದ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಮತ್ತು ಪಿಲಿಕುಳ ನಿಸರ್ಗಧಾಮದ ಗವರ್ನಿಂಗ್ ಕೌನ್ಸಿಲ್‌ನ ಸದಸ್ಯರಾದ ಪ್ರೊ. ಬಿ.ಎ. ವಿವೇಕ ರೈ ಅವರು ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕೇಂದ್ರ ಸರಕಾರದ ಪ್ರೋತ್ಸಾಹದೊಂದಿಗೆ ದೇಶದ ಕುಶಲಕರ್ಮಿಗಳು ತಾವು ತಯಾರಿಸಿದ ಆಕರ್ಷಕ ಹಾಗೂ ಬಹು ಉಪಯೋಗಿ ಸಾಮಾಗ್ರಿಗಳನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ಮಾರಾಟ ಮಾಡುವ ಇಂತಹ ಮೇಳಗಳು ಅವರಿಗೆ ಸೂಕ್ತ ಹಾಗೂ ನ್ಯಾಯ ಬೆಲೆ ಸಿಗುವಂತೆ ಮಾಡುತ್ತವೆ ಮತ್ತು ಇವುಗಳಿಂದ ದೇಶದ ವಿವಿಧ ಭಾಷೆ ಮಾತನಾಡುವ ಜನರ ವೈವಿಧ್ಯಮಯ ಸಂಸ್ಕೃತಿಗಳು ಬೆಸೆದಂತಾಗಿ ಬಾಂಧವ್ಯಗಳನ್ನು ಉತ್ತಮಗೊಳಿಸುವ ಸಹಕಾರಿಯಾಗುವುದೆಂದು ಹೇಳಿದರು.

ಕರಕುಶಲ ಮೇಳಕ್ಕೆ ಶುಭವನ್ನು ಕೋರುತ್ತಾ ಪಿಲಿಕುಳವು ಇಂತಹ ಕಾರ್ಯಕ್ರಮಗಳ ಮೂಲಕ ಕುಶಲಕರ್ಮಿಗಳಿಗೆ ಉತ್ತೇಜನ ನೀಡಿ ತನ್ನ ಉದ್ದೇಶವನ್ನು ಈಡೇರಿಸುತ್ತದೆ ಎಂದು ಪ್ರೋ. ರೈ ಹೇಳಿದರು.

ಈ ಸಂದರ್ಭದಲ್ಲಿ ಪಿಲಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್, ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಕರಕುಶಲ ಪ್ರಮೋಶನ್ ಅಧಿಕಾರಿ ಶ್ರೀ ಕಿರಣ್, ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

ಈ ಬಾರಿಯ ಮಾರಾಟ ಮೇಳಕ್ಕೆ ದೇಶದ ನಾನಾ ಭಾಗಗಳ ಕರಕುಶಲ ಕರ್ಮಿಗಳು ಆಂಧ್ರ ಪ್ರದೇಶ, ಪಾಂಡಿಚೇರಿ, ಬಿಹಾರ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ರಾಜಸ್ತಾನ ಮುಂತಾದ ಕಡೆಗಳಿಂದ ಆಗಮಿಸಿದ್ದು, ವೈಶಿಷ್ಟ ಪೂರ್ಣವಾದ ಕೈ ಬ್ಯಾಗುಗಳು, ಆಭರಣಗಳು, ಮಧುಬನಿ, ಝರಿ, ಸೀರೆಗಳು, ಸಿಲ್ಕ್ ಮತ್ತು ಹ್ಯಾಂಡ್‌ಲೂಂ, ಸೆಣಬಿನ ಬ್ಯಾಗ್, ಮರದ ಐಟಂಗಳು, ಕಲ್ಲಿನ ಕೆತ್ತನೆಗಳು, ಚನ್ನಪಟ್ಟಣ ಸಾಮಾಗ್ರಿಗಳು ರಾಜಸ್ತಾನ ಪಾದರಕ್ಷೆಗಳು, ಟೆರ್ರಾಕೋಟಾ, ರೆಡಿಮೇಡ್ ಬಟ್ಟೆಗಳು, ಇಳಕಲ್ ಸೀರೆಗಳು, ಶಾಲ್‌ಗಳು ಇವೇ ಮುಂತಾದ ಆಕರ್ಷಕ ಸಾಮಾಗ್ರಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ.

ಪ್ರದರ್ಶನದ ಸ್ಟಾಲುಗಳು ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ತೆರೆದಿರುತ್ತದೆ. ಪ್ರದರ್ಶನವು ಜನವರಿ 15ರವರೆಗೆ ಇರುತ್ತದೆ. ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‌ಗೆ ಆಗಮಿಸಿ ಈ ಕರಕುಶಲ ಸಾಮಾಗ್ರಿಗಳನ್ನು ಖರೀದಿಸಿ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಕೋರಲಾಗಿದೆ.

Comments are closed.