ಕರಾವಳಿ

ಹೊಸವರ್ಷಾಚರಣೆ ನೆಪದಲ್ಲಿ ಜಿಲ್ಲೆಯಲ್ಲಿ ಕಿರಿಕ್ ಮಾಡಿದ್ರೇ ಹುಷಾರ್; ಉಡುಪಿ ಎಸ್ಪಿ ಖಡಕ್ ಎಚ್ಚರಿಕೆ

Pinterest LinkedIn Tumblr

ಉಡುಪಿ:  2016-17 ರ ಹೊಸ ವರ್ಷದ ಆಚರಣೆಯ ಸಂಬಂಧ ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ ಮತ್ತು ಸಂಘ ಸಂಸ್ಥೆಗಳಿಗೆ ಈ ಮುಂದಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ ತಿಳುವಳಿಕೆ ನೀಡಿದ್ದಾರೆ.

udupi_sp_kt-balakrishna

(ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ )

ಆದೇಶದಲ್ಲೇನಿದೆ..?
ಡಿಸೆಂಬರ್ 31 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ಉಡುಪಿ ಜಿಲ್ಲೆಯ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ ಮತ್ತು ಸಂಘ ಸಂಸ್ಥೆಗಳು ಮತ್ತು ವಿಶೇಷ ಕೂಟಗಳು ಮಧ್ಯರಾತ್ರಿ 12.30 ಗಂಟೆಯೊಳಗೆ ಒಳಾವರಣದಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಮುಗಿಸುವುದು. ರೆಸ್ಟೋರೆಂಟ್ ಮತ್ತು ಮದ್ಯಪಾನ ಸರಬರಾಜು ಮಾಡುವ ಹೋಟೆಲ್‌ಗಳಲ್ಲಿ ಸರ್ಕಾರವು ನಿಗದಿ ಪಡಿಸಿದ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ನೂತನ ವರ್ಷಾಚರಣೆಯ ಸಂಬಂಧ ಕಾರ್ಯಕ್ರಮ ನಡೆಸಬೇಕಾದಲ್ಲಿ ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು. ಅನುಮತಿ ಪಡೆದ ಪತ್ರದ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವುದು, ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಸಹ ಎಲ್ಲಾ ಕಾರ್ಯಕ್ರಮಗಳನ್ನು ರಾತ್ರಿ 12.30 ಗಂಟೆಯ ಒಳಗಡೆ ಮುಕ್ತಾಯ ಮಾಡುವುದು.

ವಿದ್ಯಾರ್ಥಿಗಳಿಗೆ ಖಡಕ್ ಎಚ್ಚರಿಕೆ..
ವಿದ್ಯಾರ್ಥಿಗಳು ಹಾಗೂ ಯುವಕರು ಡಿಸೆಂಬರ್ 31 ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಬಾರ್, ರೆಸ್ಟೋರೆಂಟ್ ಮಾಲಕರೇ……
ಡಿಸೆಂಬರ್ 31 ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯ ಸಂತೋಷ ಕೂಟಗಳನ್ನು ನಡೆಸುವ ಜಿಲ್ಲೆಯ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ ಮತ್ತು ಸಂಘ ಸಂಸ್ಥೆಗಳಮಾಲೀಕರು/ವ್ಯವಸ್ಥಾಪಕರು/ಆಡಳಿತ ವರ್ಗದವರು ನೂತನ ವರ್ಷಾಚರಣೆ ಆಚರಿಸಲು ಮತ್ತು ಧ್ವನಿವರ್ದಕ ಅಳವಡಿಸಲು ಡಿಸೆಂಬರ್ 31 ರ ಸಂಜೆ 4 ಗಂಟೆಯ ಒಳಗೆ ಪೊಲೀಸ್ ಅಧೀಕ್ಷಕರ ಕಛೇರಿಗೆ ಅರ್ಜಿ ಸಲ್ಲಿಸಿ ಪೂರ್ವಾನುಮತಿ ಪಡೆದುಕೊಳ್ಳುವುದು. ವರ್ಷಾಚರಣೆಯನ್ನು ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ ಮತ್ತು ಸಂಘ ಸಂಸ್ಥೆಗಳ ಒಳಾವರಣದಲ್ಲೇ ನಡೆಸುವುದು.

ಅಶ್ಲೀಲ, ಅರೆಬೆತ್ತಲೆ, ಬೆತ್ತಲೆ ನೃತ್ಯ ಮಾಡಿದ್ರೇ ಹುಷಾರ್..!
ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಧ್ವನಿವಧಕವನ್ನು ಅಳವಡಿಸುವವರು ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವಂತೆ ಕಡಿಮೆ ದ್ವನಿಯಲ್ಲಿ ಕಾರ್ಯಕ್ರಮವನ್ನು ನಡೆಸಬೇಕು. ಹೊಸ ವರ್ಷದ ಆಚರಣೆಯನ್ನು ನಡೆಸುವ ಹೋಟೆಲ್, ಕ್ಲಬ್ ಅಥವಾ ವಿಶೇಷ ಕೂಟಗಳ ವ್ಯವಸ್ಥಾಪಕರು ಯಾವುದೇ ಅಹಿತಕರ ಘಟನೆಗಳಾಗದಂತೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳತಕ್ಕದ್ದು.ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಅಥವಾ ಬೆತ್ತಲೆ ನೃತ್ಯ, ಜೂಜಾಟ ನಡೆಸುವುದನ್ನು ನಿಷೇದಿಸಲಾಗಿದೆ.

ಸಾರ್ವಜನಿಕರು, ಮಹಿಳೆಯರಿಗೆ ತೊಂದರೆ ಕೊಟ್ಟರೆ ಕೇಸು..
ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವರ್ತಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಮನೆಗಳ ಮುಂದೆ, ವಿದ್ಯಾರ್ಥಿಗಳ ಹಾಸ್ಟೆಲ್, ವರ್ಕಿಂಗ್ ಉಮೆನ್ಸ್ ಹಾಸ್ಟೆಲ್ ಕಾಂಪೌಂಡ್‌ನೊಳಗೆ ಶುಭಾಶಯ ಕೋರುವ ನೆಪದಲ್ಲಿ ಅನಧಿಕೃತವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪು ಹೋಗಿ ಕಿರಿಕಿರಿ/ಅಸಭ್ಯವಾಗಿ ವರ್ತನೆ ಮಾಡುವುದನ್ನು ಮತ್ತು ಬಲವಂತವಾಗಿ ಶುಭಾಶಯ ಕೋರುವುದನ್ನು ನಿಷೇದಿಸಲಾಗಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ರೀತಿಯಲ್ಲಿ ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇದಿಸಲಾಗಿದೆ. ಸಮುದ್ರ ತೀರ ಪ್ರದೇಶ, ಬೀಚ್‌ಗಳಲ್ಲಿ ಮದ್ಯಪಾನ, ಅಶ್ಲೀಲ ವರ್ತನೆಯನ್ನು ನಿಷೇದಿಸಲಾಗಿದೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅರ್ಜಿದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಕಾರ್ಯಕ್ರಮದ ಆಯೋಜಕರು ಪರವಾನಿಗೆಯಲ್ಲಿ ನಮೂದಿಸಿದ ಶರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಖಡಕ್ ಆಗಿ ತಿಳಿಸಿದ್ದಾರೆ.

Comments are closed.