ಕರಾವಳಿ

ಏಕರೂಪ ನಾಗರಿಕ ಸಂಹಿತೆಯು ಕುರಾನ್‌ನ ಆಶಯಕ್ಕೆ ಪೂರಕವಾಗಿದೆ : ಫರಾಹ್‌ ಫೈಝ್

Pinterest LinkedIn Tumblr

citizen_council_seminr_1

ಮಂಗಳೂರು, ಡಿಸೆಂಬರ್.18: ಸಿಟಿಜನ್ಸ್‌ ಕೌನ್ಸಿಲ್‌ ಮಂಗಳೂರು ಶಾಖೆಯ ವತಿಯಿಂದ “ರಾಷ್ಟ್ರೀಯ ಐಕ್ಯತೆಗಾಗಿ ಸಮಾನ ನಾಗರಿಕ ಸಂಹಿತೆ’ ಎಂಬ ವಿಷಯದ ಕುರಿತ ಕಾರ್ಯಾಗಾರವು ಶನಿವಾರ ನಗರದ ಸಂಘನಿಕೇತನದಲ್ಲಿ ನಡೆಯಿತು.

“ರಾಷ್ಟ್ರೀಯ ಐಕ್ಯತೆಗಾಗಿ ಸಮಾನ ನಾಗರಿಕ ಸಂಹಿತೆ’ ಎಂಬ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯವಾದಿ, ರಾಷ್ಟ್ರವಾದಿ ಮುಸ್ಲಿಂ-ಮಹಿಳಾ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಫರಾಹ್‌ ಫೈಝ್ ಅವರು ಮಾತನಾಡಿ, ಎಲ್ಲ ಧರ್ಮಗಳನ್ನು ಒಂದೇ ಕಾನೂನು ವ್ಯಾಪ್ತಿಗೆ ಒಳಪಡಿಸಲು ಅವಕಾಶ ಕಲ್ಪಿಸುವ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದಿಂದ ದೇಶದ ಏಕತೆ ಇನ್ನಷ್ಟು ವೃದ್ಧಿಯಾಗಲಿದೆ ಎಂದು ಹೇಳಿದರು.

citizen_council_seminr_2 citizen_council_seminr_3

ಕುರಾನ್‌ನ ಆಶಯಕ್ಕೆ ಪೂರಕ ಏಕರೂಪ ನಾಗರಿಕ ಸಂಹಿತೆಯು ಕುರಾನ್‌ನ ಆಶಯಕ್ಕೆ ಪೂರಕವಾಗಿದೆ. ಇದರ ಕುರಿತು ನಾವು ಆತಂಕ ಪಡುವ ಅಗತ್ಯವಿಲ್ಲ. ಸಂವಿಧಾನದ 44ನೇ ವಿಧಿಯಲ್ಲಿ ಎಲ್ಲ ಪ್ರಾಂತ್ಯಗಳ ನ್ನೊಳಗೊಂಡ ಭಾರತದಲ್ಲಿ ಸಮಾನನಾಗರಿಕ ಸಂಹಿತೆ ಕುರಿತು ಪ್ರತಿಪಾದಿಸಲಾಗಿದೆ ಎಂದ ಅವರು, ಮುಸ್ಲಿಂ ಧಾರ್ಮಿಕ ಹಕ್ಕುಗಳು ಸಂವಿಧಾನದ 25 ಮತ್ತು 26ನೇ ವಿಧಿಯಲ್ಲಿ ಭದ್ರವಾಗಿವೆ. ಅಲ್ಲದೇ ಇಲ್ಲಿ ನಮಗೆ ಎಲ್ಲ ಧಾರ್ಮಿಕ ಸ್ವಾತಂತ್ರವನ್ನು ನೀಡಲಾಗಿದೆ ಎಂದರು.

citizen_council_seminr_4

ವಿಧವೆಯ ಒಳಿತಿಗಾಗಿ ವಿಧವೆಯರಿಗೆ ಉತ್ತಮ ಬದುಕು ನೀಡುವ ನಿಟ್ಟಿನಲ್ಲಿ ಮುಸ್ಲಿಮರಲ್ಲಿ ಮರು ಮದುವೆಗೆ ಅವಕಾಶ ಕಲ್ಪಿಸಲು ಬಹುಪತ್ನಿತ್ವ ಜಾರಿಗೆ ಬಂತು. ಆದರೆ ಇದನ್ನು ಪುರುಷನೋರ್ವ ನಾಲ್ಕು ಮದುವೆಯಾಗಬಹುದೆಂದು ಸಾರಲಾಯಿತು. ತ್ರಿವಳಿ ತಲಾಖ್‌ ಜಾರಿ ಗೊಳಿಸಲಾಯಿತು ಎಂದು ಫರಾಹ್‌ ಫೈಝ್ ಹೇಳಿದರು.

citizen_council_seminr_5

citizen_council_seminr_6

ಶರಿಯತ್‌ನಲ್ಲಿ ಬದಲಾಗಿಲ್ಲ ವೈಯಕ್ತಿಕ ಕಾನೂನುಗಳು ರಚನೆ ಯಾದದ್ದು ಬ್ರಿಟಿಷರ ಕಾಲದಲ್ಲಿ. ಅನಂತರ ಇಂತಹ ಕಾನೂನುಗಳಲ್ಲಿ ಸುಧಾರಣೆಯಾಗಬೇಕೆಂದು ಸಮಾಜ ಸುಧಾರಕರು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಹಿಂದೂ ಕಾನೂನಿನಲ್ಲಿ ಅನೇಕ ಬದಲಾವಣೆಗಳು ನಡೆದವು. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು ನಿರಾಕರಿಸಲಾಗಿತ್ತಾದರೂ ಅನಂತರದ ದಿನಗಳಲ್ಲಿ ಕೇಂದ್ರ ಸರಕಾರ ಮಹತ್ತರ ಮಸೂದೆ ಜಾರಿಗೊಳಿಸಿ ಅವರಿಗೂ ಆಸ್ತಿ ಹಕ್ಕು ಕಲ್ಪಿಸಿಕೊಟ್ಟಿತ್ತು. ಆದರೆ ಮುಸ್ಲಿಮರ ವೈಯಕ್ತಿಕ ಕಾನೂನು ಶರಿಯತ್‌ನಲ್ಲಿ ಇದುವರೆಗೆ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು. ಮಹಿಳೆಯರ ರಕ್ಷಣೆಗಾಗಿರುವ ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನ ಮಾಡುವಲ್ಲಿ ಖಂಡಿತ ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ ಎಂದರು.

citizen_council_seminr_7

ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾವು ಮೂಲ ಭೂತವಾದಿ ಧೋರಣೆಯಿಂದ ಹೊರ ಬಂದು ಎಲ್ಲರೂ ಸಮಾನರು ಎಂದು ಒಪ್ಪಿಕೊಳ್ಳಬೇಕು. ಆಳವಾಗಿ ಬೇರೂರಿರುವ ಮೂಲಭೂತವಾದವನ್ನು ಕಿತ್ತು ಹಾಕಿ ಎಲ್ಲರೂ ಸಮಾನರು ಎಂಬುದನ್ನು ಏಕರೂಪ ನಾಗರಿಕ ಸಂಹಿತೆ ಮಾಡುತ್ತದೆ. ಇದು ಜಾರಿಗೆ ಬಂದರೆ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಅಲ್ಲ; ಎಲ್ಲಾ ಸಮುದಾಯ ಗಳ ಧಾರ್ಮಿಕ ಚೌಕಟ್ಟಿಗೂ ತೊಂದರೆ ಯಾಗುತ್ತದೆ. ಆದರೆ ನಮ್ಮ ನಾಳೆಗಳ ಒಳ್ಳೆಯದಕ್ಕೆ ಅದನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಅವಶ್ಯವಾಗಿ ನಿರ್ಮಾಣ ವಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

citizen_council_seminr_8

ಹಿಂದೂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದ ಹೆಣ್ಣು ಮತ್ತು ಗಂಡು ಮಕ್ಕಳು ಸಮಾನವಾಗಿ ಬದುಕುತ್ತಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳೂ ಕೂಡ ಗಂಡು ಮಕ್ಕಳಿಗೆ ಸಮಾನವಾಗಿ ಬದುಕುವಂತಾಗಬೇಕು ಎಂದು ಆಶಿಸಿದ ಚಕ್ರವರ್ತಿ ಸೂಲಿಬೆಲೆ ಅವರು, ಹಿಂದೂ ಕೋಡ್‌ ಬಿಲ್‌ನ್ನು ಅವತ್ತು ಹಿಂದೂಗಳು ವಿರೋಧಿಸುತ್ತಿದ್ದರೆ ಇಂದು ನಾವೂ ಸಮಸ್ಯೆಯಲ್ಲಿರುತ್ತಿದ್ದೆವು. ಆದರೆ ಎಲ್ಲರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದರಿಂದ ಪ್ರಸ್ತುತ ಯಾವುದೇ ಸಮಸ್ಯೆ ಹಿಂದೂ ಧರ್ಮದಲ್ಲಿ ಇಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಮುಸಲ್ಮಾನರೂ ಬೆಂಬಲಿಸಿದರೆ ಮುಂದಿನ ಹತ್ತು ವರ್ಷಗಳಲ್ಲಿ ಮುಸ್ಲಿಂ ಸಮುದಾಯದಲ್ಲಿಯೂ ಗಂಡು ಹೆಣ್ಣು ಸಮಾನ ಸ್ಥಾನಮಾನ ಪಡೆಯಲು ಸಾಧ್ಯ ಎಂದರು.

Comments are closed.