ಮಂಗಳೂರು, ಡಿಸೆಂಬರ್,9 :ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿದ ಬಳಿಕ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಡಿಸ್ಚಾರ್ಜ್ ಮಾಡುವ ವೇಳೆ ಹಳೆಯ ನೋಟು ಸ್ವೀಕರಿಸದಿರುವ ಬಗ್ಗೆ ರಾಜ್ಯದೆಲ್ಲೆಡೆ ದೂರುಗಳು ಬಂದಿವೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಿ ಧೋರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಪಿಎಂಡಿಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್) ಕಾಯ್ದೆಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿ ಕೆಲವು ತಿದ್ದುಪಡಿಗಳ ನಂತರ 2-3 ತಿಂಗಳೊಳಗೆ ವರದಿ ನೀಡಲಿದೆ ಎಂದು ಹೇಳಿದರು.
ಕೆ.ಎಮ್.ಸಿ ಆಸ್ಪತ್ರೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವರು:
ಇತ್ತೀಚಿಗೆ ಕೇಂದ್ರ ಸಚಿವ ಸದಾನಂದ ಗೌಡ ಅವರ ಸಹೋದರನ ಸಾವಿನ ಸಂದರ್ಭದಲ್ಲಿ ನಗರದ ಜ್ಯೋತಿ ಚಿತ್ರಮಂದಿರದ ಸಮೀಪವಿರುವ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಹಳೆಯ ನೋಟು ಸ್ವೀಕರಿಸದಿಸಿರುವ ಬಗ್ಗೆ ಉಂಟಾದ ವಿವಾದದ ಬಗ್ಗೆ ಕೆ.ಎಮ್.ಸಿ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಚರ್ಚಿಸಿ ಈ ಬಗ್ಗೆ ವಿವರಣೆ ಕೇಳಿರುವುದಾಗಿ ತಿಳಿಸಿದ ಸಚಿವರು, ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಚಿಕಿತ್ಸೆ ಅಮೇಲೆ ಪಾವತಿಯಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಬರಬೇಕಾದರೆ ಜನಪ್ರತಿನಿಧಿಗಳೂ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.