ಕರಾವಳಿ

ಚಿಕಿತ್ಸಾ ಉಪಯೋಗಿ, ಮಾದಕ ಔಷಧಿಗಳ ಬಗ್ಗೆ ಎಚ್ಚರಿಕೆ

Pinterest LinkedIn Tumblr

drugss

ಮ೦ಗಳೂರು : ಚಿಕಿತ್ಸಾ ಉಪಯೋಗಿ ಮಾದಕ, ಅಮಲು ಉಂಟು ಮಾಡುವ ಔಷಧಗಳ ದುರ್ಬಳಕೆ ಕುರಿತು ಔಷಧ ನಿಯಂತ್ರಣ ಇಲಾಖಾ ವತಿಯಿಂದ ಉಳ್ಳಾಲ, ತೊಕ್ಕೊಟ್ಟು, ದೇರಳಕಟ್ಟೆ, ತಲಪಾಡಿ ಮತ್ತು ನಾಟೆಕಲ್ ಪ್ರದೇಶದ ಔಷಧ ವ್ಯಾಪಾರಿಗಳಿಗೆ ತಿಳುವಳಿಕೆ ನೀಡಲಾಯಿತು.

ಚಿಕಿತ್ಸಾ ಉಪಯೋಗಿ ಅವಲಂಬನೆ ಉಂಟುಮಾಡುವ ಔಷಧಿಗಳನ್ನು ಅಧೀಕೃತ ಔಷಧ ಸರಬರಾಜುದಾರರಿಂದ ಪಡೆದು ಅವಶ್ಯವಿರುವ ರೋಗಿಗಳಿಗೆ ವೈದ್ಯರ ಸಲಹಾ ಚೀಟಿ ಮೇರೆಗೆ ಮಾತ್ರ ಮಾರಾಟ ಮಾಡುವಂತೆ ಸೂಚಿಸಲಾಯಿತು.

ಯಾವುದೇ ವೈದ್ಯರ ಅನಧೀಕೃತ ಸಲಹಾ ಚೀಟಿಗೆ ಹಾಗೂ ವೈದ್ಯರ ಸಲಹಾ ಚೀಟಿ ಇಲ್ಲದೆ ಇಂತಹ ಔಷಧಿಗಳನ್ನು ಜನಸಾಮಾನ್ಯರಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು. ಈ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಹೆಚ್ಚು ಇದ್ದು ವಿದ್ಯಾರ್ಥಿಗಳು ಇಂತಹ ಔಷಧಗಳ ಸೇವನೆಯಿಂದ ದುಷ್ಚಟಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಔಷಧ ವ್ಯಾಪಾರಸ್ಥರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇವುಗಳಿಗೆ ಅವಕಾಶ ನೀಡಬಾರದು. ಯಾರಾದರೂ ಒತ್ತಾಯ ಪೂರಕವಾಗಿ ಇಂತಹ ಔಷಧಗಳಿಗೆ ಬೇಡಿಕೆ ಇಟ್ಟಲ್ಲಿ, ಬೆದರಿಕೆ ಒಡ್ಡಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ದೂರು ನೀಡುವಂತೆ ಸೂಚಿಸಲಾಯಿತು.

ಯಾರಾದರೂ ಅಪರಿಚಿತ ವ್ಯಕ್ತಿಗಳು ಚಿಕಿತ್ಸಾ ಉಪಯೋಗಿ ಅವಲಂಬನೆ ಉಂಟು ಮಾಡುವ ಔಷಧಗಳನ್ನು ಅಕ್ರಮ ಕಳ್ಳಸಾಗಾಟ ಮಾಡಿ ಜನರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಳ್ಳತನದಿಂದ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ, ಮಾಹಿತಿ ಇದ್ದಲ್ಲಿ ಔಷಧ ನಿಯಂತ್ರಣ ಇಲಾಖೆಗೆ ತಿಳಿಸುವಂತೆ ಸೂಚಿಸಲಾಗಿದೆ.

ಯಾವುದೇ ಔಷಧ ವ್ಯಾಪಾರಸ್ಥರು ಕಾನೂನು ಕ್ರಮಗಳನ್ನು ಉಲ್ಲಂಘಿಸಿ ಇಂತಹ ಔಷಧಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀವ್ರವಾಗಿ ಎಚ್ಚರಿಸಲಾಗಿದೆ.

ಸಾರ್ವಜನಿಕರು ವೈದ್ಯರ ಸಲಹಾ ಚೀಟಿಯ ಮೇರೆಗೆ ಮಾತ್ರ ಔಷಧಿಗಳನ್ನು ಅಧೀಕೃತ ಔಷಧ ವ್ಯಾಪಾರಸ್ಥರಿಂದ ಖರೀದಿಸಿ ಉಪಯೋಗಿಸಲು ಕೋರಲಾಗಿದೆ. ಸಭೆಯಲ್ಲಿ ದ.ಕ. ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಶ್ರೀ. ಶ್ರೀಧರ ಕಾಮತ್ ಹಾಗೂ ಕಾರ್ಯದರ್ಶಿ ಶ್ರೀ. ಗಣೇಶ್ ಕಾಮತ್ ಉಪಸ್ಥಿತರಿದ್ದರು. ಸಭೆಗೆ ಆ ಭಾಗದ ಎಲ್ಲಾ ಔಷಧ ವ್ಯಾಪಾರಸ್ಥರು ಭಾಗವಹಿಸಿದ್ದರು ಎಂದು ಸಹಾಯಕ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.