ಕುಂದಾಪುರ: ನೋಟ್ ಬ್ಯಾನ್ ವಿಚಾರದಲ್ಲಿ ಇಂದು ಕರೆ ನೀಡಲಾಗಿರುವ ಭಾರತ್ ಬಂದ್ ಗೆ ಕುಂದಾಪುರದಲ್ಲಿ ಯಾವುದೇ ಬೆಂಬಲ ಈವರೆಗೂ ಕಂಡುಬಂದಿಲ್ಲ. ಬದಲಿಗೆ ಸಾರ್ವಜನಿಕರು ಬಂದ್ ನ ವಿರುದ್ದ ಮಾತನಾಡುತ್ತಿದ್ದಾರೆ. ಜನಜೀವನವನ್ನು ಮತ್ತಷ್ಟು ಕಂಗೆಡಿಸಬೇಡಿ ಎಂದು ನಿವೇಧಿಸಿದ್ದಾರೆ. ಈ ನಡುವೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಅಳವಡಿಸಿರುವ ಬ್ಯಾನರ್ ವೊಂದು ಎಲ್ಲರ ಗಮನಸೆಳೆದಿದೆ. ಈ ಕುರಿತ ಒಂದು ಸ್ಟೋರಿಯಿದು.
ಇದೇ ನವೆಂಬರ್ ೮ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು 500 ಹಾಗೂ 1000 ಮುಖಬೆಲೆಯ ನೋಟು ಬ್ಯಾನ್ ಮಾಡುವ ಮೂಲಕ ದೇಶದಲ್ಲಿಯೇ ಒಂದು ಸಂಚಲನ ಮೂಡಿಸಿದ್ರು. ಇದಕ್ಕೆ ಪ್ರತಿಪಕ್ಷಗಳು ತೀವ್ರ ಗರಂ ಆಗಿದ್ದು ಭಾರತ್ ಬಂದಿಗೆ ಕರೆ ನೀಡಿದ್ರು. ಆದರೇ ಭಾರತ್ ಬಂದ್ ಗೆ ಉಡುಪಿ ಸೇರಿದಂತೆ ಕುಂದಾಪುರದ ಬಹುತೇಕ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದರಲ್ಲಿಯೂ ದೇವಳಗಳ ಗ್ರಾಮ ಬಸ್ರೂರಿನಲ್ಲಿ ಜನರು ಬಂದ್ ಬಗ್ಗೆ ತಮ್ಮ ವಿರೋಧವನ್ನು ಬ್ಯಾನರ್ ಮೂಲಕ ವ್ಯಕ್ತಪಡಿಸಿದ್ದಾರೆ. ರಾತ್ರೋ ರಾತ್ರಿ ಬಸ್ರೂರು ಪೇಟೆಯಲ್ಲಿ ಹಾಕಿದ ಬ್ಯಾನರ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಭಾರತ ಬಂದ್ ನಡೆಸಿದ್ರೇ ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಬರೆದಿರುವ ನಾಗರಿಕರು, ನಮ್ಮೂರಿನಲ್ಲಿ ಭೃಷ್ಟರೂ ಇಲ್ಲ, ನಮ್ಮಲ್ಲಿ ಕಪ್ಪು ಹಣವೂ ಇಲ್ಲ. ನಮ್ಮ ತಾತ್ಕಾಲಿಕ ವೈಯ್ಯಕ್ತಿಕ ಸಮಸ್ಯೆ ಮೀರಿ ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಕೇಂದ್ರ ಸರ್ಕಾರದ ಹೋರಾಟದಲ್ಲಿ ನಾವೂ ಕೈ ಜೋಡಿಸುತ್ತೇವೆ ಎಂದು ಬರೆದಿದ್ದಾರೆ. ಈ ಬ್ಯಾನರ್ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟ ಸ್ಥಳೀಯ ಹೂವಿನಂಗಡಿ ಮಾಲೀಕ ಹರೀಶ್ ಖಾರ್ವಿ ಕೂಡ ಈ ಬ್ಯಾನರ್ ಯಾರೇ ಹಾಕಿರಲಿ ಆದ್ರೇ ಒಳ್ಳೆಯದನ್ನೇ ಹಾಕಿದ್ದಾರೆ ಅದಕ್ಕೆ ನಮ್ಮ ಸಪೋರ್ಟ್ ಇದೆ ಎನ್ನುತ್ತಾರೆ.
ಈ ಬ್ಯಾನರ್ ಹಾಕಿದವರ್ಯಾರೋ ಗೊತ್ತಿಲ್ಲ. ಆದರೆ ಪರಿಸರದ ನಾಗರಿಕರು ಈ ಸಂದೇಶವನ್ನು ಬೆಂಬಲಿಸಿರೋದಂತೂ ಸತ್ಯ. ಇಂದಿನ ಬಂದ್ ಕೂಡ ಆಚರಿಸದಿರುವುದು ಕೂಡ ಅಷ್ಟೇ ಸತ್ಯ.
——————-
ವರದಿ- ಯೋಗೀಶ್ ಕುಂಭಾಸಿ